16ನೇ ಆವೃತ್ತಿಯ ಐಪಿಎಲ್ ವಿಜೇತರ ಘೋಷಣೆಗೆ ಇನ್ನೂ ನಾಲ್ಕೇ ಮೆಟ್ಟಿಲು ಬಾಕಿ ಉಳಿದಿದೆ. ನಿನ್ನೆ ನಡೆದ ಗ್ರೂಪ್ ಹಂತದ ಕೊನೆಯ ಪಂದ್ಯಗಳಲ್ಲಿ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು ಪ್ಲೇಆಫ್ಗೇರಿದರೆ, ಗುಜರಾತ್ ಟೈಟಾನ್ಸ್ ವಿರುದ್ಧ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೇಸ್ನಿಂದ ಹೊರಬಿದ್ದಿತು. ಇದೀಗ ಪ್ಲೇಆಫ್ ಅಖಾಡಕ್ಕೆ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ತಂಡಗಳು ಅಧಿಕೃತ ಪ್ರವೇಶ ಪಡೆದವು. ನಾಳೆಯಿಂದ ಪ್ಲೇಆಫ್ ಪಂದ್ಯಗಳು ನಡೆಯಲಿವೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇಆಫ್ಗೆ ಅರ್ಹತೆ ಪಡೆಯಿತು. ತಂಡ ಆಡಿದ 14 ಪಂದ್ಯಗಳಲ್ಲಿ 10 ಗೆದ್ದು 4 ರಲ್ಲಿ ಸೋಲು ಕಂಡು 20 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಮೊದಲ ಕ್ವಾಲಿಫೈಯರ್ಗೆ ತಲುಪಿತು.
ಇನ್ನು, ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲು, 1 ಫಲಿತಾಂಶವಿಲ್ಲದೇ ಒಟ್ಟು 17 ಅಂಕಗಳ ಸಮೇತ 2ನೇ ತಂಡವಾಗಿ ಮೊದಲನೇ ಕ್ವಾಲಿಫೈಯರ್ ತಲುಪಿದೆ. ಹೀಗಾಗಿ ತಂಡಕ್ಕೆ ಪ್ಲೇಆಫ್ನಲ್ಲಿ ಗುಜರಾತ್ ಎದುರಾಗಲಿದೆ. ನಾಳೆ (ಮೇ 23 ರಂದು) ಮೊದಲ ಕ್ವಾಲಿಫೈಯರ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ರಾತ್ರಿ 7.30 ಕ್ಕೆ ನಡೆಯಲಿದೆ.
ಎಲಿಮಿನೇಟ್ ಆಗೋರ್ಯಾರು?:ಕೆಎಲ್ ರಾಹುಲ್ ಗಾಯಗೊಂಡ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಉತ್ತಮವಾಗಿ ನಡೆಸುತ್ತಿರುವ ಕೃನಾಲ್ ಪಾಂಡ್ಯ ತಂಡವನ್ನು ಎರಡನೇ ಬಾರಿಗೆ ನಾಕೌಟ್ ಹಂತಕ್ಕೆ ತಂದಿದ್ದಾರೆ. 14 ಪಂದ್ಯಗಳಿಂದ 17 ಅಂಕ ಪಡೆದಿರುವ ಲಖನೌ, 8 ಗೆಲುವು, 5 ಸೋಲು ಕಂಡು, ಮೂರನೇ ತಂಡವಾಗಿ ಪ್ಲೇಆಫ್ನ ಎಲಿಮಿನೇಟರ್ ಹಂತಕ್ಕೆ ಬಂದಿದೆ. ಇತ್ತ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡ ಕೊನೆ ಕ್ಷಣದಲ್ಲಿ ನಡೆಸಿದ ಹೋರಾಟದಿಂದ ಪ್ಲೇಆಫ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು.
ಮುಂಬೈ ತಾನಾಡಿದ 14 ಪಂದ್ಯಗಳಲ್ಲಿ 16 ಅಂಕ ಗಳಿಸಿದೆ. ಇದರಲ್ಲಿ 8 ಗೆಲುವು, 6 ಸೋಲು ಕಂಡಿದೆ. ಎಲಿಮಿನೇಟರ್ ಹೋರಾಟದಲ್ಲಿ ಮುಂಬೈ ಮತ್ತು ಲಕ್ನೋ ಸೆಣಸಾಡಲಿದ್ದು, ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದವರು ಕ್ವಾಲಿಫೈಯರ್-2 ಹಂತಕ್ಕೆ ತಲುಪಿದ್ದಾರೆ.