ಕರ್ನಾಟಕ

karnataka

ETV Bharat / sports

ಮುಂಬೈ ಇಂಡಿಯನ್ಸ್​ಗೆ 81 ರನ್​ ಜಯ: ಐಪಿಎಲ್​ನಿಂದ ಲಖನೌ 'ಎಲಿಮಿನೇಟ್​' - ಮುಂಬೈ ಇಂಡಿಯನ್ಸ್​ಗೆ ಗೆಲುವು

ಮಹತ್ವದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ಲಖನೌ ಸೂಪರ್​ಜೈಂಟ್ಸ್​ ಸೋಲು ಕಂಡು ಐಪಿಎಲ್​ ಅಭಿಯಾನ ಮುಗಿಸಿತು. ಗೆದ್ದ ಮುಂಬೈ ಇಂಡಿಯನ್ಸ್​ ಕ್ವಾಲಿಫೈಯರ್​- 2 ಹಂತ ತಲುಪಿತು.

ಐಪಿಎಲ್​ನಿಂದ ಲಖನೌ 'ಎಲಿಮಿನೇಟ್​'
ಐಪಿಎಲ್​ನಿಂದ ಲಖನೌ 'ಎಲಿಮಿನೇಟ್​'

By

Published : May 25, 2023, 7:14 AM IST

ಚೆನ್ನೈ:ಸ್ಪಿನ್​ ಸ್ನೇಹಿ​, ಬ್ಯಾಟರ್​ಗಳಿಗೆ ನೆರವು ನೀಡುವ ಇಲ್ಲಿನ ಚೆಪಾಕ್​ ಮೈದಾನದಲ್ಲಿ ನಿನ್ನೆ (ಬುಧವಾರ) ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಲಖನೌ ಸೂಪರ್​ ಜೈಂಟ್ಸ್​ ವೇಗಿಗಳೇ ಮೇಲುಗೈ ಸಾಧಿಸಿದರು. ಅದರಲ್ಲೂ ಆಕಾಶ್​​ ಮಧ್ವಾಲ್​ರ ಉರಿ ಬೌಲಿಂಗ್ ದಾಳಿಗೆ ಸಿಲುಕಿದ ಕೃನಾಲ್​​ ಪಾಂಡ್ಯ ನೇತೃತ್ವದ ಪಡೆ ಟೂರ್ನಿಯಿಂದಲೇ ಎಲಿಮಿನೇಟ್​ ಆಯಿತು. ಒದ್ದಾಡಿಕೊಂಡು ನಾಕೌಟ್​ ತಲುಪಿರುವ ಮುಂಬೈ ಪಂದ್ಯ ಜಯಿಸುವ ಮೂಲಕ ಪ್ರಶಸ್ತಿ ಸುತ್ತಿಗಾಗಿ ಇನ್ನೊಂದು ಹೆಜ್ಜೆ ಮುಂದಿಟ್ಟಿತು.

ಲಖನೌ ಸೋಲು ಅನುಭವಿಸುವ ಮೂಲಕ ಐಪಿಎಲ್​ ಅಭಿಯಾನ ಮುಗಿಸಿದರೆ, ಮುಂಬೈ​ ಕ್ವಾಲಿಫೈಯರ್​- 2 ಹಂತಕ್ಕೆ ತಲುಪಿತು. ಮೊದಲು ಬ್ಯಾಟ್​ ಮಾಡಿದ ಮುಂಬೈ 8 ವಿಕೆಟ್​ಗೆ 182 ರನ್​ ಗಳಿಸಿತು. ಸವಾಲಿನ ಮೊತ್ತ ಬೆನ್ನತ್ತಿದ ಸೂಪರ್‌​ಜೈಂಟ್ಸ್​ ದಿಢೀರ್​ ಕುಸಿತ ಕಂಡು 101 ರನ್​ಗೆ ಸೋಲೊಪ್ಪಿಕೊಂಡಿತು.

ಕಳೆದ ಆವೃತ್ತಿಯಲ್ಲೂ ಎಲಿಮಿನೇಟರ್​ ಹಂತದಲ್ಲಿ ಸೋಲು ಕಂಡಿದ್ದ ಲಖನೌ, ಈ ಬಾರಿಯೂ ಎಡವಿತು. ಬ್ಯಾಟರ್​ಗಳ ದಿಢೀರ್​ ಪತನದಿಂದಾಗಿ ತಂಡ ಅಲ್ಪಮೊತ್ತಕ್ಕೆ ಕುಸಿಯಿತು. ಮಾರ್ಕಸ್​​ ಸ್ಟೊಯಿನೀಸ್​ 40, ಕೈಲ್​ ಮೇಯರ್ಸ್​ 18, ದೀಪಕ್ ಹೂಡಾ 15 ರನ್​ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟರ್ ಕೂಡ ಎರಡಂಕಿ ದಾಟಲಿಲ್ಲ. 69 ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ತಂಡ ಆಕಾಶ್​​ ಮದ್ವಾಲ್​ರ ದಾಳಿಗೆ ನೆಲಕಚ್ಚಿ 101 ರನ್​​ಗೆ ಆಲೌಟ್​ ಆಗಿ ಮುಂಬೈ ಮುಂದೆ 81 ರನ್​ಗಳಿಂದ ಮಂಡಿಯೂರಿತು.

ಉತ್ತಮವಾಗಿ ಆಡುತ್ತಿದ್ದ ಸ್ಟೊಯಿನೀಸ್​ ಮತ್ತು ದೀಪಕ್​ ಹೂಡಾ ರನ್​ ಕದಿಯುವ ವೇಳೆ ರನೌಟ್​ ಆಗಿದ್ದು, ತಂಡಕ್ಕೆ ದುಬಾರಿಯಾಯಿತು. ಮೂವರು ಬ್ಯಾಟರ್​ಗಳು ರನೌಟ್​ ಆದರು. ಹೊಡಿಬಡಿ ದಾಂಡಿಗ ನಿಕೋಲಸ್​ ಪೂರನ್​​ ಮಹತ್ವದ ಪಂದ್ಯದಲ್ಲಿ ಸೊನ್ನೆ ಸುತ್ತಿದರು. ಇದರಿಂದ ತಂಡ 16.3 ಓವರ್​ಗಳಲ್ಲಿ ಗಂಟುಮೂಟೆ ಕಟ್ಟಿತು.

ಆಕಾಶ್​ ಮದ್ವಾಲ್​ ದಾಖಲೆ:ಮಹತ್ವದ ಎಲಿಮಿನೇಟರ್​ ಪಂದ್ಯದಲ್ಲಿ ಲಖನೌ ವಿರುದ್ಧ ದಂಡೆತ್ತಿದ ಆಕಾಶ್​ ಮಧ್ವಾಲ್​ 5 ವಿಕೆಟ್​ ಗೊಂಚಲು ಪಡೆದರು. ಈ ಮೂಲಕ ಎಲಿಮಿನೇಟರ್​ ಪಂದ್ಯದಲ್ಲಿ 5 ವಿಕೆಟ್​ ಕಿತ್ತ ಮೊದಲ ಬೌಲರ್​ ದಾಖಲೆ ಬರೆದರೆ, 5 ರನ್​ ನೀಡಿ 5 ವಿಕೆಟ್​ ಪಡೆದ ಮಾಜಿ ಕ್ರಿಕೆಟಿಗ ಅನಿಲ್​ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದರು.

ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್​ ನಿಧಾನಗತಿ ಪಿಚ್​​ನಲ್ಲಿ ಉತ್ತಮ ಬ್ಯಾಟಿಂಗ್​ ಮಾಡಿತು. ಅದ್ಭುತ ಲಯದಲ್ಲಿರುವ ಕ್ಯಾಮರೂನ್​ ಗ್ರೀನ್​ 41, ಸೂರ್ಯಕುಮಾರ್​ ಯಾದವ್​ 33, ತಿಲಕ್​ ವರ್ಮಾ 26, ನೆಹಾಲ್​ ವಧೇರಾ 23 ರನ್​ ಮಾಡಿ ತಂಡಕ್ಕೆ ನೆರವಾದರು. ನಾಯಕ ರೋಹಿತ್​ ಶರ್ಮಾ(11) ಈ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿದರು. ಲಖನೌನ ನವೀನ್​ ಉಲ್​ ಹಕ್​ 4, ಯಶ್​ ಠಾಕೂರ್​ 3 ವಿಕೆಟ್​ ಕಿತ್ತ ಹೊರತಾಗಿಯೂ ಮುಂಬೈ ನಿಗದಿತ ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 182 ರನ್​ ಸಂಪಾದಿಸಿತು.

ಕ್ವಾಲಿಫೈಯರ್​ 2- ಗುಜರಾತ್​ ಎದುರಾಳಿ:ಲಖನೌ ಸದೆಬಡಿದು ಕ್ವಾಲಿಫೈಯರ್​ 2 ಹಂತಕ್ಕೆ ಸಾಗಿರುವ ಮುಂಬೈ ಇಂಡಿಯನ್ಸ್​, ಹಾರ್ದಿಕ್​ ಪಾಂಡ್ಯ ನೇತೃತ್ವದ ಗುಜರಾತ್​ ಟೈಟಾನ್ಸ್​ ಅನ್ನು ನಾಳೆ ಎದುರಿಸಲಿದೆ. ಮೊದಲ ಕ್ವಾಲಿಫೈಯರ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗುಜರಾತ್​ ಸೋಲು ಕಂಡಿತ್ತು. ಇಲ್ಲಿ ಗೆದ್ದ ತಂಡ ಸಿಎಸ್​ಕೆ ವಿರುದ್ಧ ಫೈನಲ್​ನಲ್ಲಿ ಸೆಣಸಾಡಲಿದೆ.

ಇದನ್ನೂ ಓದಿ:MI vs LSG Eliminator: ನವೀನ್​, ಯಶ್​ ಆಕ್ರಮಣಕಾರಿ ಬೌಲಿಂಗ್​ ನಡುವೆ 183 ರನ್​ಗಳ ಸಾಧಾರಣ ಗುರಿ ನೀಡಿದ ಮುಂಬೈ

ABOUT THE AUTHOR

...view details