ಅಹಮದಾಬಾದ್ (ಗುಜರಾತ್):ಸೋಮವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ 5 ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯದಲ್ಲಿ ಮತ್ತೊಮ್ಮೆ ಎಂ.ಎಸ್.ಧೋನಿ ಅವರ ಅದ್ಭುತ ಸ್ಟಂಪಿಂಗ್‌ಗೆ ಕ್ರಿಕೆಟ್ ಲೋಕ ಬೆರಗಾಯಿತು.
ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್‌ಗಳ ಪೈಕಿ ಒಬ್ಬರಾದ ಧೋನಿ ಮುಂದೆ ನಿನ್ನೆ ಪ್ರತಿಭಾವಂತ ಬ್ಯಾಟರ್ ಶುಭಮನ್ ಗಿಲ್ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಧೋನಿ ಅವರ ಕ್ವಿಕ್ ಸ್ಟಂಪಿಂಗ್‌ನಿಂದಾಗಿ ಈ ಋತುವಿನ ಆರೆಂಜ್ ಕ್ಯಾಪ್ ಗೌರವ ಪಡೆದ ಗಿಲ್ ಕೇವಲ 39 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಚೆನ್ನೈ ತಂಡ ಬೌಲಿಂಗ್ನಲ್ಲಿ ಕಮ್‌ಬ್ಯಾಕ್ ಮಾಡಿತು. ಧೋನಿ ಸ್ಟಂಪಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ತಾನಾಡಿದ 17 ಪಂದ್ಯಗಳಲ್ಲಿ 890 ರನ್ ಗಳಿಸಿದ್ದಾರೆ. ಅಂತಿಮ ಪಂದ್ಯಕ್ಕೂ ಮೊದಲು ಗಿಲ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಗಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಚೆನ್ನೈಗೆ ಗಿಲ್ ವಿಕೆಟ್ ಪ್ರಮುಖವಾಗಿತ್ತು.
ಪಂದ್ಯದ ಎರಡನೇ ಓವರ್ನಲ್ಲಿ ಮೂರು ರನ್ಗಳಿಸಿದ್ದ ವೇಳೆ ಗಿಲ್ ಕ್ಯಾಚ್ ನೀಡಿದ್ದರು. ಆದರೆ ದೀಪಕ್ ಚಹಾರ್ ಆ ಕ್ಯಾಚ್ ಕೈಚಲ್ಲಿದ್ದರು. ಸಿಕ್ಕ ಅವಕಾಶ ಕೈಬಿಟ್ಟಿದ್ದರಿಂದ ಗಿಲ್ ಚೆನ್ನೈ ಬೌಲರ್ಗಳನ್ನು ಕಾಡಬಹುದು ಎಂದೇ ಅಂದಾಜಿಸಲಾಗಿತ್ತು. ಅದರಂತೆ ಜೀವದಾನ ಪಡೆದ ಗಿಲ್ ವೇಗವಾಗಿ ಸ್ಕೋರ್ ಹೆಚ್ಚಿಸಲು ಪ್ರಾರಂಭಿಸಿದರು. 19 ಎಸೆತಗಳಲ್ಲಿ 39 ರನ್ ಸಹ ಗಳಿಸಿದರು. ಇನ್ನೊಂದು ತುದಿಯಲ್ಲಿ ಸಹಾ ಕೂಡ ವೇಗವಾಗಿ ರನ್ ಪೇರಿಸುತ್ತಿದ್ದರು. ಪವರ್‌ಪ್ಲೇ ನಂತರ ಗುಜರಾತ್ ಯಾವುದೇ ವಿಕೆಟ್ ನಷ್ಟವಿಲ್ಲದೆ 62 ರನ್ ಗಳಿಸಿತ್ತು. ಇದರಿಂದ ಗುಜರಾತ್ ಉತ್ತಮ ಆರಂಭ ಪಡೆಯಿತು.