ಅಹಮದಾಬಾದ್ (ಗುಜರಾತ್) :ಭಾನುವಾರ ಸಂಜೆ (ನಿನ್ನೆ) ನಡೆಯಬೇಕಿದ್ದಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಫೈನಲ್ ಪಂದ್ಯವನ್ನು ಮಳೆಯಿಂದಾಗಿ ಇಂದಿಗೆ ಮುಂದೂಡಲಾಗಿದೆ. ನರೇಂದ್ರ ಮೋದಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದು, ಆಟಗಾರರು ಮತ್ತು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆಯಾಯಿತು.
ಟಾಸ್ಗೂ ಅರ್ಧ ಘಂಟೆ ಮುನ್ನವೇ ಪ್ರಾರಂಭವಾದ ಮಳೆ ಮುಂದಿನ ಎರಡೂವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಿರಂತರವಾಗಿ ಸುರಿದ ಮಳೆಯಿಂದ ಪಂದ್ಯವನ್ನು ರದ್ದುಗೊಳಿಸಿ ಸೋಮವಾರಕ್ಕೆ (ಇಂದು) ಮುಂದೂಡಲಾಯಿತು. ರಾತ್ರಿ 10:55ಕ್ಕೆ ಈ ಘೋಷಣೆ ಮಾಡಲಾಯಿತು.
ಐಪಿಎಲ್ ನಿಯಮವೇನು?:
- ಪ್ರತಿ ತಂಡವು ಕನಿಷ್ಠ 5 ಓವರ್ ಆಡಲು ಸಾಧ್ಯವಾಗದಿದ್ದರೆ, ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆ.
- ಕೇವಲ ಒಂದೇ ಎಸೆತವಾಗಿ ಮಳೆಯಾದಲ್ಲಿ ಮೀಸಲು ದಿನದಂದು ಅಲ್ಲಿಂದಲೇ ಪಂದ್ಯ ಮುಂದುವರಿಯುತ್ತದೆ.
- ಟಾಸ್ ನಂತರ ಒಂದೇ ಒಂದು ಎಸೆತ ಕಾಣದೆ ಪಂದ್ಯ ರದ್ದಾದರೆ ಮೀಸಲು ದಿನದಂದು ಪಂದ್ಯ ಮತ್ತೆ ಆರಂಭವಾಗಲಿದೆ. ಆದರೆ ಮೀಸಲು ದಿನದಂದು ಪುನಃ ಟಾಸ್ ಮಾಡಬೇಕು. ಅಲ್ಲದೇ ತಂಡದ ನಾಯಕರೂ ತಂಡದ ಆಟಗಾರರನ್ನು ಬದಲಿಸಬಹುದು.
ಇಂದೂ ಮಳೆಯಾದರೆ?:ಇದೀಗ ಉಭಯ ತಂಡಗಳ ನಡುವಿನ ಪಂದ್ಯವನ್ನು ಇಂದು ಅದೇ ಮೈದಾನದಲ್ಲಿ ಆಯೋಜಿಸಲಾಗಿದೆ. ಮಳೆಯಿಂದಾಗಿ ಮೀಸಲು ದಿನವೂ ಪಂದ್ಯ ಆಡಲಾಗದಿದ್ದರೆ, ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ವಿಜಯಶಾಲಿಯಾಗಲಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ಗೆ ಲಾಭವಾಗಲಿದೆ. ಐಪಿಎಲ್ 2023 ಚಾಂಪಿಯನ್ ಆಗಲಿದೆ.