ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಏಪ್ರಿಲ್ 9 ರಿಂದ ಮೇ 30ರವರೆಗೆ ಪಂದ್ಯಾವಳಿ ನಡೆಯಲಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಹಣಾಹಣಿ
60 ಪಂದ್ಯಗಳ ವಿವೋ ಐಪಿಎಲ್ ಟೂರ್ನಿ ಏಪ್ರಿಲ್ 9 ರಿಂದ ಮೇ 30ರವರೆಗೆ ಅಂದರೆ ಒಟ್ಟು 52 ದಿನಗಳ ಕಾಲ ನಡೆಯಲಿದೆ. ಅಹಮದಾಬಾದ್, ಚೆನ್ನೈ, ಬೆಂಗಳೂರು, ನವದೆಹಲಿ, ಕೋಲ್ಕತ್ತಾ ಹಾಗೂ ಮುಂಬೈನಲ್ಲಿ ಪಂದ್ಯ ಜರುಗಲಿದೆ. ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದರೆ, ಮೇ 30 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಹಣಾಹಣಿ ನಡೆಯಲಿದೆ.
ಗುಜರಾತ್ನ ಅಹಮದಾಬಾದ್ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಮೊಟೆರಾ ಸ್ಟೇಡಿಯಂ ಹೆಸರು ಬದಲಿಸಿ ನರೇಂದ್ರ ಮೋದಿ ಕ್ರೀಡಾಂಗಣ ಎಂದು ನಾಮಕರಣ ಮಾಡಲಾಗಿತ್ತು.
MI - RCB ನಡುವೆ ಮೊದಲ ಪಂದ್ಯ
ಏ. 9ರಂಧು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಮುಖಾಮುಖಿಯಾಗಲಿವೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ. ದಿನದ ಮೊದಲ ಪಂದ್ಯ 3.30ಕ್ಕೆ ಆರಂಭವಾಗಲಿದ್ದು, 2ನೇ ಮ್ಯಾಚ್ ಸಂಜೆ 7.30ಕ್ಕೆ ಶುರುವಾಗಲಿದೆ.
ತವರು ಅಂಗಳದಲ್ಲಿ ಆಟಕ್ಕೆ ಅವಕಾಶವಿಲ್ಲ
56 ಲೀಗ್ ಪಂದ್ಯಗಳಲ್ಲಿ ಚೆನ್ನೈ, ಮುಂಬೈ, ಬೆಂಗಳೂರು ಹಾಗೂ ಕೋಲ್ಕತ್ತಾದಲ್ಲಿ 10 ಪಂದ್ಯಗಳು ನಡೆಯಲಿದ್ದು, ಅಹಮದಾಬಾದ್ ಮತ್ತು ದೆಹಲಿ 8 ಟೂರ್ನಿಗಳ ಆತಿಥ್ಯ ವಹಿಸಲಿದೆ. ಪ್ರತಿ ತಂಡಗಳು ಲೀಗ್ ಹಂತದಲ್ಲಿ ಆರರ ಪೈಕಿ ನಾಲ್ಕು ಸ್ಥಳಗಳಲ್ಲಿ ಆಡಲಿವೆ. ಆದರೆ ಈ ಬಾರಿಯ ಐಪಿಎಲ್ನ ಪ್ರಮುಖ ಅಂಶವೆಂದರೆ ಯಾವುದೇ ತಂಡಗಳು ತಮ್ಮ ತವರು ಅಂಗಳದಲ್ಲಿ ಆಡುವುದಿಲ್ಲ. ಉದಾಹರಣೆಗೆ ಆರ್‌ಸಿಬಿ ಪಂದ್ಯ ಬೆಂಗಳೂರಲ್ಲಿ ನಡೆಯುವುದಿಲ್ಲ. ಬೆಂಗಳೂರು ಬದಲಾಗಿ ಬೇರೆ ನಗರಗಳಲ್ಲಿ ನಡೆಯುತ್ತದೆ.
ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದಿಂದಾಗಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) ಪ್ರೇಕ್ಷಕರಿಲ್ಲದೇ ಐಪಿಎಲ್ ಟೂರ್ನಿ ನಡೆದಿತ್ತು. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಿತ್ತು.