ಅಹಮದಾಬಾದ್ (ಗುಜರಾತ್): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾರ್ಚ್ 31 ರಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ಮುಖಾಮುಖಿಯಿಂದ ಆರಂಭವಾಗಿತ್ತು. ಇಂದು 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಅದೇ ಮೈದಾನದಲ್ಲಿ ಅದೇ ತಂಡಗಳು ಚಾಂಪಿಯನ್ ಆಗಲು ಹೋರಾಟ ಮಾಡಲಿವೆ!.
ಧೋನಿ ನಾಯಕತ್ವದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಫೈಟ್ ಇಂದು ಭಾರಿ ಕುತೂಹಲ ಕೆರಳಿಸಿದೆ. ಧೋನಿಗೆ ಇದೇ ಕೊನೆಯ ಐಪಿಎಲ್ ಆವೃತ್ತಿ ಎಂದು ಹೇಳಲಾಗುತ್ತಿದ್ದು, ಕಪ್ ಗೆದ್ದು ನಾಯಕನಿಗೆ ಗೆಲುವಿನ ವಿದಾಯ ಹೇಳಲು ತಂಡ ಸಜ್ಜಾಗಿದೆ.
ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚೆಪಾಕ್ನಲ್ಲಿ ಜಿಟಿಯನ್ನು ತನ್ನ ಬಲಿಷ್ಠ ಬೌಲಿಂಗ್ನಿಂದ ಕಟ್ಟಿಹಾಕಿ ಗೆದ್ದು ನೇರ ಫೈನಲ್ ಪ್ರವೇಶ ಪಡೆದುಕೊಂಡಿತ್ತು. ಹಾಲಿ ಚಾಂಪಿಯನ್ಸ್ ಕ್ವಾಲಿಫೈಯರ್ ಎರಡರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶುಭಮನ್ ಗಿಲ್ ಅವರ ಅಬ್ಬರದ ಶತಕದ ನೆರವಿನಿಂದ ಬೃಹತ್ ಗುರಿ ಕೊಟ್ಟಿದ್ದಲ್ಲದೇ, ಬೌಲಿಂಗ್ನಲ್ಲಿ ಮೋಹಿತ್ ಶರ್ಮಾ 5 ವಿಕೆಟ್ ಕಬಳಿಸಿ 62 ರನ್‌ಗಳ ಬೃಹತ್ ಗೆಲುವು ಪಡೆದು ಅಂತಿಮ ಘಟ್ಟ ಪ್ರವೇಶಿಸಿದೆ.
ಗುಜರಾತ್‌ಗಿದೆ ಬಲಿಷ್ಠ ಬ್ಯಾಟಿಂಗ್ ಬಲ: ಗುಜರಾತ್ ತಂಡ 8ನೇ ಆಟಗಾರನವರೆಗೆ ಬ್ಯಾಟಿಂಗ್ ಬಲ ಹೊಂದಿದೆ. ಇದು ತಂಡ ಬೃಹತ್ ರನ್ ಗಳಿಸಲು ಸಹಕಾರಿಯಾಗಿದೆ. ಕಳೆದ ನಾಲ್ಕು ಪಂದ್ಯದಲ್ಲಿ ಗಿಲ್ ಮೂರು ಶತಕ ಬಾರಿಸಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅಲ್ಲದೇ ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ತೆವಾಟಿಯಾ, ಮಿಲ್ಲರ್, ರಶೀದ್ ಖಾನ್ ಮತ್ತು ಸಾಯಿ ಸುದರ್ಶನ್ ಜಿಟಿಯ ಬ್ಯಾಟಿಂಗ್ ಬಲವಾಗಿದ್ದಾರೆ. ಬೌಲಿಂಗ್ನಲ್ಲಿ ಅನುಭವಿಗಳಾದ ಮೋಹಿತ್ ಶರ್ಮಾ, ಮಹಮ್ಮದ್ ಶಮಿ ಮತ್ತು ರಶೀದ್ ಖಾನ್ ಎದುರಾಳಿ ಮೇಲೆ ನಿಯಂತ್ರಣ ಸಾಧಿಸುತ್ತಾ ಬಂದಿದ್ದಾರೆ.
ಗಿಲ್ ಕಟ್ಟಿ ಹಾಕಬೇಕಿದೆ ಸಿಎಸ್ಕೆ: ಸಿಎಸ್ಕೆ ತಂಡ ಗಿಲ್ ಅವರನ್ನು ಕಟ್ಟಿ ಹಾಕುವ ಅಗತ್ಯವಿದೆ. 16 ಪಂದ್ಯದಲ್ಲಿ ಗಿಲ್ 3 ಶತಕ, 4 ಅರ್ಧಶತಕ ಗಳಿಸಿ ಲೀಗ್ನ ಅತಿ ಹೆಚ್ಚು ರನ್ಗಳಿಸಿದ ಬ್ಯಾಟರ್ ಆಗಿದ್ದಾರೆ. 851 ಗಳಿಸಿರುವ ಗಿಲ್ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. 123 ರನ್ ಗಳಿಸಿದಲ್ಲಿ 2016ರ ವಿರಾಟ್ ಕೊಹ್ಲಿ (973 ರನ್) ದಾಖಲೆ ಮುರಿಯಲಿದ್ದಾರೆ.
ಚೆನ್ನೈಗೆ ಆರಂಭಿಕ ಜೊತೆಯಾಟದ ಬಲ: ಗಾಯಕ್ವಾಡ್ ಮತ್ತು ಕಾನ್ವೆ ಲೀಗ್ನಲ್ಲಿ ಸಿಎಸ್ಕೆಗೆ ಉತ್ತಮ ಆರಂಭ ನೀಡುತ್ತಾ ಬಂದಿದ್ದಾರೆ. ಜಿಟಿಗೆ ಈ ಜೊತೆಯಾಟ ಮುರಿಯುವ ಚಾಲೆಂಜ್ ಇದೆ. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಬರುವ ದುಬೆ ಮತ್ತು ತಂಡ ಸಂಕಷ್ಟದಲ್ಲಿದ್ದಾಗ ನಿಂತು ಆಡುವ ಜಡೇಜ ಅವರನ್ನೂ ಬೇಗ ಪೆವಿಲಿಯನ್ಗೆ ಕಳಿಸಬೇಕಿದೆ.