16ನೇ ಆವೃತ್ತಿಯ ಐಪಿಎಲ್ನ ನಾಕೌಟ್ ಪಂದ್ಯಗಳು ಇಂದಿನಿಂದ ಆರಂಭವಾಗಲಿವೆ. ನಾಲ್ಕು ಬಲಿಷ್ಠ ತಂಡಗಳು ಪ್ಲೇಆಫ್ ತಲುಪಿದ್ದು, ಅದರಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ಇಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಹೇಂದ್ರ ಸಿಂಗ್ ದೋನಿ ನೇತೃತ್ವದ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಫೈನಲ್ ಟಿಕೆಟ್ಗಾಗಿ ಕಾದಾಡಲಿವೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಪ್ರವೇಶ ಪಡೆಯಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶವಾಗಿ 2ನೇ ಕ್ವಾಲಿಫೈಯರ್ನಲ್ಲಿ ಆಡಲಿದೆ. 12 ಬಾರಿ ಪ್ಲೇಆಫ್ ಪ್ರವೇಶಿಸಿರುವ ಸಿಎಸ್ಕೆ, ದಾಖಲೆಯ 10ನೇ ಸಲ ಫೈನಲ್ಗೆ ಎಂಟ್ರಿ ಕೊಡುವ ಉತ್ಸಾಹದಲ್ಲಿದೆ. ಇತ್ತ ಸತತ ಎರಡನೇ ಬಾರಿಗೆ ಪ್ಲೇಆಫ್ಗೇರಿ ಫೈನಲ್ ಟಿಕೆಟ್ ತನ್ನದಾಗಿಸಿಕೊಳ್ಳಲು ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಟವಾಡಲು ಸಜ್ಜಾಗಿದೆ.
ಗುಜರಾತ್ ಬಲಾಬಲ:ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಸೋಲಿಸಿ ಇಮ್ಮಡಿ ಉತ್ಸಾಹದಲ್ಲಿರುವ ತಂಡ ಒಂದೇ ದಿನದ ಅಂತರದಲ್ಲಿ ಫೈನಲ್ ಕಾದಾಟ ನಡೆಸುತ್ತಿದೆ. 14 ಪಂದ್ಯಗಳಲ್ಲಿ 10 ಗೆಲುವು ಕಂಡಿರುವ ತಂಡ ಬ್ಯಾಟಿಂಗ್, ಬೌಲಿಂಗ್ನಲ್ಲಿ ಸಮತೋಲನ ಕಾಯ್ದುಕೊಂಡಿದೆ. ಹೈದರಾಬಾದ್, ಆರ್ಸಿಬಿ ವಿರುದ್ಧ ಸತತ 2 ಶತಕ ಬಾರಿಸಿ ಅಮೋಘ ಲಯದಲ್ಲಿರುವ ಆರಂಭಿಕ ಆಟಗಾರ ಶುಭಮನ್ ಗಿಲ್ ತಂಡದ ತಂಡದ ಟ್ರಂಪ್ಕಾರ್ಡ್.
ಗಿಲ್ ಬ್ಯಾಟ್ ಬೀಸಲು ಶುರು ಮಾಡಿದರೆ, ಗೆಲುವಿನ ದಡ ಸೇರುವುದು ಸಲೀಸು. ಟೂರ್ನಿಯಲ್ಲಿ ಸರ್ವಾಧಿಕ ರನ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇದಲ್ಲದೇ, ಡೇವಿಡ್ ಮಿಲ್ಲರ್, ಹಾರ್ದಿಕ್ ಪಾಂಡ್ಯ, ದಸುನ್ ಶನಕಾ, ರಾಹುಲ್ ತೆವಾಟಿಯಾ, ವಿಜಯ್ ಶಂಕರ್ ಬಲ ತುಂಬಿದ್ದಾರೆ. ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ. ಅತ್ಯಧಿಕ ವಿಕೆಟ್ ಟೇಕರ್ಗಳ ಪಟ್ಟಿಯಲ್ಲಿ ಗುಜರಾತ್ ಇಬ್ಬರು ಮೊದಲೆರಡು ಸ್ಥಾನದಲ್ಲಿದ್ದಾರೆ.
ಮೊಹಮದ್ ಶಮಿ, ರಶೀದ್ ಖಾನ್ ತಲಾ 24 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ಗಾಗಿ ಸೆಣಸಾಟ ನಡೆಸುತ್ತಿದ್ದಾರೆ. ಅದರಲ್ಲೂ ಶಮಿ ವೇಗ ಬ್ಯಾಟರ್ಗಳ ದಿಕ್ಕು ತಪ್ಪಿಸುತ್ತಿದೆ. ರಶೀದ್ ಸ್ಪಿನ್ ಜಾಲ ಅಷ್ಟೇ ಪ್ರಭಾವಿತವಾಗಿದೆ. ಇದರೊಂದಿಗೆ ಮೋಹಿತ್ ಶರ್ಮಾ, ನೂರ್ ಅಹ್ಮದ್ ಯಶ್ ದಯಾಳ್ ಕೂಡ ಉತ್ತಮ ಬೌಲಿಂಗ್ ನಡೆಸುತ್ತಿದ್ದಾರೆ. ಮತ್ತೊಂದು ಸಂಘಟಿತ ಪ್ರದರ್ಶನ ಕಂಡುಬಂದಲ್ಲಿ ತಂಡ ಫೈನಲ್ ಟಿಕೆಟ್ ಪಡೆಯುವುದು ನಿಶ್ಚಿತ.
ದೋನಿ ತಂಡಕ್ಕೆ ಪ್ಲಸ್ ಆಗುತ್ತಾ ತವರು?:ದೋನಿ ನೇತೃತ್ವದ ಚೆನ್ನೈ ತಂಡ ಕೂಡ ಅಷ್ಟೇ ಬಲಿಷ್ಠವಾಗಿದೆ. ಮೊದಲು ತೊಡರುತ್ತಾ ಸಾಗಿದ ತಂಡ ಬಳಿಕ ಪುಟಿದೆದ್ದು ಪ್ಲೇಆಫ್ಗೆ ಲಗ್ಗೆ ಇಟ್ಟಿದೆ. ದೋನಿ ನಾಯಕತ್ವದ ಕೌಶಲ್ಯಗಳು ತಂಡದ ಪ್ಲಸ್ ಆಗಿದ್ದರೆ, ಭರ್ಜರಿ ಫಾರ್ಮ್ನಲ್ಲಿರುವ ಆರಂಭಿಕರಾದ ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ, ಶಿವಂ ದುಬೆ ಬ್ಯಾಟಿಂಗ್ ಬಲವಾಗಿದ್ದಾರೆ. ಮೊಯೀನ್ ಅಲಿ, ರವೀಂದ್ರ ಜಡೇಜಾ ಆಲ್ರೌಂಡ್ ಆಟ ನೀಡಿದರೆ, ಬೌಲಿಂಗ್ನಲ್ಲಿ ತುಷಾರ್ ದೇಶಪಾಂಡೆ, ದೀಪಕ್ ಚಹರ್, ಮಹೇಶ್ ತೀಕ್ಷಣ, ಮತೀಶ್ ಪತಿರಾನ ಮೊನಚಿನ ದಾಳಿ ನಡೆಸುತ್ತಿದ್ದಾರೆ. ಗ್ರೂಪ್ ಹಂತದ 14 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಸಾಧಿಸಿರುವ ಚೆನ್ನೈ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಿಯಾಗಿದೆ. 4 ಬಾರಿಯ ಚಾಂಪಿಯನ್ ಆಗಿರುವ ತಂಡಕ್ಕೆ ಅನುಭವದ ದೊಡ್ಡ ಬಲವಿದೆ.