ಬೆಂಗಳೂರು: ನಿನ್ನೆ ಆರ್ಸಿಬಿ ಮತ್ತು ಲಕ್ನೋ ನಡುವಣ ಪಂದ್ಯದಲ್ಲಿ ಕೊನೆಯ ಓವರ್ ರೋಚಕತೆಯಿಂದ ಕೂಡಿತ್ತು. ಹಲವಾರು ವಿಚಿತ್ರ ಕ್ಷಣಗಳಿಗೂ ಸಾಕ್ಷಿಯಾಯಿತು. ಕೊನೆಯ 6 ಬಾಲ್ಗೆ 5 ರನ್ನ ಅಗತ್ಯ ಸೂಪರ್ ಕಿಂಗ್ಸ್ಗೆ ಇತ್ತು. ಇದನ್ನು ರಕ್ಷಿಸಿಕೊಳ್ಳವಲ್ಲಿ ಹರ್ಷಲ್ ಪಟೇಲ್ ಹರಸಾಹಸ ಪಟ್ಟರಾದರೂ ಗೆಲುವು ಲಕ್ನೋ ಪಾಲಾಯಿತು. ಲಕ್ನೋ ಸೂಪರ್ ಜೈಂಟ್ಸ್ ಅಭಿಮಾನಿಗಳಿಗೆ ಇದು ಅವಿಸ್ಮರಣೀಯ ಗೆಲುವಾದರೆ, ಆರ್ಸಿಬಿ ಪಾಲಿಗೆ ಅತ್ಯಂತ ದುಃಖದ ಸೋಲಾಗಿದೆ.
ಹರ್ಷಲ್ ಓವರ್ ಹೀಗಿತ್ತು..: ಮೊದಲ ಬಾಲ್ ಎದುರಿಸಿದ ಜಯದೇವ್ ಉನಾದ್ಕತ್ ಒಂದು ರನ್ಗಳಿಸಿದರು. ಎರಡನೇ ಬಾಲ್ನಲ್ಲಿ ಮಾರ್ಕ್ ವುಡ್ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ರವಿ ಬಿಷ್ಣೋಯಿ ಮೂರು ಮತ್ತು ನಾಲ್ಕನೇ ಬಾಲ್ನಲ್ಲಿ ಕ್ರಮವಾಗಿ ಎರಡು ಮತ್ತು 1 ರನ್ಗಳಿಸಿದರು. ಪಂದ್ಯ ಟೈ ಆಗಿತ್ತು. ಲಕ್ನೋ ಗೆಲುವಿಗೆ 1 ರನ್ ಅಗತ್ಯ ಇತ್ತು. ಐದನೇ ಬಾಲ್ನಲ್ಲಿ ಜಯದೇವ್ ಡು ಪ್ಲೆಸಿಸ್ಗೆ ಕ್ಯಾಚ್ ನೀಡಿದರು. ಇದರಿಂದ 1 ಬಾಲ್ 1 ರನ್ ಮತ್ತು 1 ವಿಕೆಟ್ ಉಳಿದುಕೊಂಡಿತ್ತು.
ಹರ್ಷಲ್ ಪಟೇಲ್ ಆರನೇ ಬಾಲ್ ಮಾಡಲು ಮುಂದಾದಾಗ ಆವೇಶ್ ಖಾನ್ ಕ್ರೀಸ್ ಬಿಟ್ಟಿದ್ದರು. ಮಂಕಡಿಂಗ್ ಮಾಡಲು ಪ್ರಯತ್ನಿಸಿ ವಿಫಲರಾದರು. ಆದರೆ ಮುಂದೆ ಹೋಗಿದ್ದ ಅವರು ಥ್ರೋ ಮೂಲಕ ಡೈರೆಕ್ಟ್ ಹಿಟ್ ಮಾಡಿದ್ದರು. ಆದರೆ ಅದನ್ನು ಅಂಪೈಯರ್ ಔಟ್ ನೀಡಲಿಲ್ಲ. ಮತ್ತೆ ಕೊನೆಯ ಬಾಲ್ನಲ್ಲಿ ಬೈಸ್ ಮುಖಾಂತರ ಒಂದು ರನ್ ಪಡೆದು ಲಕ್ನೋ ಗೆಲುವು ದಾಖಲಿಸಿತು.
ಡೈರೆಕ್ಟ್ ಹಿಟ್ ಏಕೆ ಔಟ್ ಅಲ್ಲ: ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ನ ಕಾನೂನು 38.3.1.2 ರ ಪ್ರಕಾರ, 'ಬೌಲರ್ ಸಾಮಾನ್ಯವಾಗಿ ಚೆಂಡನ್ನು ಹಾಕಲು ಬಂದಾಗ ತಕ್ಷಣವೇ ನಾನ್-ಸ್ಟ್ರೈಕರ್ ತುದಿಯಲ್ಲಿರುವ ಆಟಗಾರ ಕ್ರೀಸ್ ತೊರೆದಿದ್ದರೆ ಔಟ್ ಮಾಡಬಹುದು. ಆದರೆ ಒಮ್ಮೆ ಮಾತ್ರ ಬೌಲರ್ ಈ ಪ್ರಯತ್ನ ಮಾಡಿಬಹುದು. ಮುಂದೆ ಹೋಗಿ ಮತ್ತೆ ಪ್ರಯತ್ನ ಪಟ್ಟರೆ ಅದು ಅಮಾನ್ಯವಾಗುತ್ತದೆ'.