ನವದೆಹಲಿ : ಈ ಬಾರಿಯ ಐಪಿಎಲ್-2023 ಓಪನಿಂಗ್ ಮ್ಯಾಚ್ ಸಂದರ್ಭದಲ್ಲಿ ಅದರ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ. ಆದರೆ ಇದೇ ವೇಳೆ ಈ ಮ್ಯಾಚನ್ನು ಡಿಜಿಟಲ್ ಮಾಧ್ಯಮದಲ್ಲಿ ನೋಡಿದವರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ, ಪಂದ್ಯಾವಳಿಯ ಅಧಿಕೃತ ಪ್ರಸಾರಕನಾದ ಸ್ಟಾರ್ ಸ್ಪೋರ್ಟ್ಸ್ ಆರಂಭಿಕ ಪಂದ್ಯಕ್ಕಾಗಿ 7.29 ರ ಟಿವಿಆರ್ ದಾಖಲಿಸಿದೆ. ಇದು 2021 ರ ಆವೃತ್ತಿಯ 8.25 ಮತ್ತು 2020ರ ಆವೃತ್ತಿಯ 10.36 ಗಿಂತ ಬಹಳ ಕಡಿಮೆಯಾಗಿದೆ.
2023ರ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಶೇ 33 ರಷ್ಟು ವೀಕ್ಷಕರು ಟಿವಿಯಲ್ಲಿ ನೋಡಿದ್ದಾರೆ. ಇದು ಕಳೆದ 6 ಐಪಿಎಲ್ ಸೀಸನ್ಗಳಲ್ಲಿ ಅತಿ ಕಡಿಮೆ ಪ್ರಮಾಣವಾಗಿದೆ. ಬಾರ್ಕ್ (BARC) ಅಂಕಿ ಅಂಶಗಳನ್ನು ನೋಡುವುದಾದರೆ, ಕಳೆದ ವರ್ಷ ಇದ್ದ ಶೇ 23.1 ವೀಕ್ಷಕರ ಪ್ರಮಾಣಕ್ಕೆ ಹೋಲಿಸಿದರೆ ಅದು ಈ ಬಾರಿ ಶೇ 22 ಆಗಿದೆ. ಡಿಜಿಟಲ್ ವೀಕ್ಷಕರ ಸಂಖ್ಯೆಯನ್ನು ನೋಡುವುದಾದರೆ, ಈ ಬಾರಿ ಜಿಯೊಸಿನಿಮಾ ಐಪಿಎಲ್ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ಡಿಸ್ನಿ ಹಾಟ್‌ಸ್ಟಾರ್ ಪಂದ್ಯಾವಳಿಯನ್ನು ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರ ಮಾಡಿತ್ತು. ಆದರೆ ಜಿಯೊಸಿನೆಮಾ ಈ ಬಾರಿ ಡಿಸ್ನಿ ಹಾಟ್‌ಸ್ಟಾರ್ ವೀಕ್ಷಕರ ಸಂಖ್ಯೆಯನ್ನು ಮೀರಿಸಿದೆ. ಪಂದ್ಯಾವಳಿ ಆರಂಭವಾದ ಮೊದಲ ವಾರದಿಂದಲೇ ಜಿಯೊ ಸಿನೆಮಾ ಡಿಸ್ನಿ ಹಾಟ್‌ಸ್ಟಾರ್ ಗಿಂತ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ.