ಮುಂಬೈ : ಮಾರ್ಚ್ 31ರಂದು ಕ್ರಿಕೆಟ್ ಹಬ್ಬಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದ್ದು, ಈಗಾಗಲೇ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಲೀಗ್ ಮೊದಲ ಪಂದ್ಯಾಟ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ನಡೆಯಲಿದ್ದು, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಒಟ್ಟು 12 ನಗರಗಳಲ್ಲಿ 74 ಪಂದ್ಯಗಳು ನಡೆಯಲಿವೆ.
ಈ ಐಪಿಎಲ್ನ ಅಧಿಕೃತ ಬ್ರಾಡ್ಕಾಸ್ಟರ್ ಆಗಿರುವ ಸ್ಟಾರ್ ಸ್ಪೋರ್ಟ್ಸ್ ಕಾಮೆಂಟರಿ ಪ್ಯಾನೆಲ್ಗಳನ್ನು ಘೋಷಣೆ ಮಾಡಿದೆ. ಐಪಿಎಲ್ ಅಭಿಮಾನಿಗಳು ಟಿ20 ವಿಶ್ವಕಪ್ ವಿಜೇತ ನಾಯಕರಾದ ಪಾಲ್ ಕಾಲಿಂಗ್‌ವುಡ್ ಮತ್ತು ಆರೋನ್ ಫಿಂಚ್ ಅವರ ಧ್ವನಿಯನ್ನು ಪಂದ್ಯ ವೀಕ್ಷಣೆ ವೇಳೆ ಕೇಳಬಹುದು. ಐಪಿಎಲ್ ದಂತಕಥೆ ಕೆವಿನ್ ಪೀಟರ್ಸನ್, ಡ್ಯಾನಿ ಮಾರಿಸನ್ ಕೂಡ ಇವರಿಗೆ ಜೊತೆಯಾಗಲಿದ್ದಾರೆ. ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಜಾಕ್ ಕಾಲಿಸ್ ಕೂಡ ಇದೇ ಮೊದಲ ಬಾರಿಗೆ ಸ್ಟಾರ್ ಸ್ಪೋರ್ಟ್ಸ್ ಪ್ಯಾನೆಲ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಸ್ಪಿನ್ ಮಾಂತ್ರಿಕ ಇಮ್ರಾನ್ ತಾಹಿರ್ ಕೂಡ ತಮ್ಮ ಸ್ಪಿನ್ ಅನುಭವಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಮಾಜಿ ಐಪಿಎಲ್ ತರಬೇತುದಾರರಾದ ಟಾಮ್ ಮೂಡಿ, ಡೇನಿಯಲ್ ವೆಟ್ಟೋರಿ ಮತ್ತು ಸೈಮನ್ ಕ್ಯಾಟಿಚ್ ಆಟದ ಆಂತರಿಕ ದೃಷ್ಟಿಕೋನವನ್ನು ವೀಕ್ಷಕರಿಗೆ ವಿಶ್ಲೇಷಿಸಲಿದ್ದಾರೆ. ಅಬ್ಬರದ ಬ್ಯಾಟಿಂಗ್ ಮತ್ತು ತಮ್ಮ ವಿಭಿನ್ನ ಕಮೆಂಟರಿ ಶೈಲಿಗಳೊಂದಿಗೆ ಜನಪ್ರಿಯರಾದ ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಪಂದ್ಯ ವೀಕ್ಷಕ ವಿವರಣೆ ನೀಡಲಿದ್ದು, ಇವರ ಜೊತೆಗೆ ಸಾರ್ವಕಾಲಿಕ ಮಹಿಳಾ ಆಟಗಾರರಲ್ಲಿ ಒಬ್ಬರಾದ ಮಿಥಾಲಿ ರಾಜ್ ಜೊತೆಯಾಗಲಿದ್ದಾರೆ. ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಹರ್ಭಜನ್ ಸಿಂಗ್ ಅವರೊಂದಿಗೆ ಮೊಹಮ್ಮದ್ ಕೈಫ್ ಪ್ಯಾನೆಲ್ ಸೇರಿಕೊಳ್ಳಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಪ್ಯಾನೆಲ್‌ನಲ್ಲಿ ಭಾರತದ ಮಾಜಿ ಆಲ್‌ರೌಂಡರ್ ಮತ್ತು ICC T20 ವಿಶ್ವಕಪ್ 2007ರ ವಿಜೇತ ಇರ್ಫಾನ್ ಪಠಾಣ್ ಕೂಡ ಸೇರಿದ್ದು, ಇವರೊಂದಿಗೆ ಎರಡು ಬಾರಿ ವಿಶ್ವ ಚಾಂಪಿಯನ್ ಮತ್ತು ಸಹೋದರ ಯೂಸುಫ್ ಪಠಾಣ್ ಕೂಡ ಇರಲಿದ್ದಾರೆ.