ಬೆಂಗಳೂರು: 16ನೇ ಐಪಿಎಲ್ ಆವೃತ್ತಿಯನ್ನು ಮುಂಬೈ ಇಂಡಿಯನ್ಸ್ನ್ನು ಮಣಿಸುವ ಮೂಲಕ ಭರ್ಜರಿ ಆರಂಭ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಡನ್ ಗಾರ್ಡನ್ನಲ್ಲಿ ಕೊಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಹೀನಾಯ ಸೋಲನುಭವಿಸಿ ರನ್ ರೇಟ್ ಕಳೆದುಕೊಂಡು ಅಂಕಪಟ್ಟಿಯಲ್ಲಿ ಕುಸಿಯಿತು. ಇಂದು ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫಾಫ್ ಹುಡುಗರು, ಕನ್ನಡಿಗ ಕೆಎಲ್ ರಾಹುಲ್ ಅವರ ಪಾಳಯವನ್ನು ಎದುರಿಸುತ್ತಿದ್ದಾರೆ.
ಆರ್ಸಿಬಿ ರನ್ ರೇಟ್ ಉತ್ತಮ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ದೊಡ್ಡ ಗೆಲುವನ್ನು ಸಾಧಿಸಲು ತಯಾರಿ ನಡೆಸುತ್ತಿದ್ದರೆ, ಅತ್ತ ಲಕ್ನೋ ಮೂರನೇ ಗೆಲುವು ಪಡೆದು ಅಂಕಪಟ್ಟಿಯ ಅಗ್ರಸ್ಥಾನಕ್ಕೇರಲು ಕಣ್ಣಿಟ್ಟಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿರುವ ಮೂರರಲ್ಲಿ ಎರಡು ಪಂದ್ಯವನ್ನು ಜಯಿಸಿದೆ. ಆದರೆ ಗೆದ್ದ ಎರಡೂ ಪಂದ್ಯಗಳು ಲಕ್ನೋದಲ್ಲಿ ಆಡಲಾಗಿತ್ತು. ಚೆನ್ನೈನ ಚೆಪಾಕ್ನಲ್ಲಿ ಸೋಲನುಭವಿಸಿತ್ತು.
ಸ್ಪಿನ್ನರ್ಗಳ ಮುಂದೆ ಆರ್ಸಿಬಿ ಮಂಕು:ಕೆಕೆಆರ್ನ ಸ್ಪಿನ್ ಬೌಲರ್ಗಳ ವಿರುದ್ಧ ಚಾಲೆಂಜರ್ಸ್ ಬ್ಯಾಟರ್ಗಳು ವಿಫಲರಾಗಿದ್ದರು. ಕೆಲ ವಿಮರ್ಶೆಗಳ ಪ್ರಕಾರ ಕೆಲ ಐಪಿಎಲ್ ನಡೆಯುವ ಎಲ್ಲ ಪಿಚ್ಗಳು ಸ್ಪಿನ್ ಬೌಲಿಂಗ್ಗೆ ಸಹಕಾರಿಯಗಿ ವರ್ತಿಸುತ್ತಿವೆ. ಅದಕ್ಕೆ ಕಾರಣ ಪಿಚ್ನಲ್ಲಿ ಪದೇ ಪದೆ ಪಂದ್ಯ ನಡೆದಾಗ ನೆಲದ ಶೈನ್ ಹೋಗಿ ಬಿರುಕುಗಳು ಹೆಚ್ಚಾಗುದರಿಂದ ಸ್ಪಿನ್ ಪಿಚ್ ನಂತೆ ವರ್ತಿಸುತ್ತದೆ. ಇದರಿಂದ ಆರ್ಸಿಬಿ ಆಟಗಾರರು ಇದಕ್ಕೆ ತಕ್ಕಂತ ಬ್ಯಾಟಿಂಗ್ ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕಾಗುತ್ತದೆ.
ಡೆತ್ ಓವರ್ ನಿಯಂತ್ರಣ: ಎರಡೂ ಪಂದ್ಯದಲ್ಲಿ ಆರ್ಸಿಬಿ 15ರ ನಂತರದ ಓವರ್ಗಳಲ್ಲಿ ಸುಲಭವಾಗಿ ರನ್ಗಳನ್ನು ಬಿಟ್ಟುಕೊಟ್ಟಿದೆ. ಮೊದಲ ಪಂದ್ಯದಲ್ಲಿ ತಿಲಕ್ ವರ್ಮ ಡೆತ್ ಓವರ್ಗಳಲ್ಲಿ ಸವಾರಿ ಮಾಡಿದರೆ, ಕೋಲ್ಕತ್ತಾ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮನ ಬಂದಂತೆ ರನ್ ಗಳಿಸಿದರು. ಎರಡನೇ ಪಂದ್ಯದಲ್ಲಿ ಶಾರ್ದೂಲ್ ರನ್ಗೆ ಕಡಿವಾಣ ಹಾಕಿದ್ದರೆ ಆರ್ಸಿಬಿಗೆ ಗೆಲುವು ಹತ್ತಿರದಲ್ಲಿತ್ತು.
ಕೈಲ್ ಮೇಯರ್ಸ್ ಲಕ್ನೋ ಬಲ:ಆರಂಭಿಕ ಕೈಲ್ ಮೇಯರ್ಸ್ ಅಬ್ಬರದ ಆಟ ಎಲ್ಎಸ್ಜಿಯ ಬ್ಯಾಟಿಂಗ್ಗೆ ಬಲವಾಗಿದೆ. ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಕೆಎಲ್ ರಾಹುಲ್ಗೆ ತವರು ಮೈದಾನದ ಲಾಭವೂ ಇದೆ. ಅತ್ತ ನಿಕೋಲಸ್ ಪೂರನ್, ಮಾರ್ಕಸ್ ಸ್ಟೋನಿಸ್ ಅಥವಾ ಕ್ವಿಂಟನ್ ಡಿ ಕಾಕ್ ತಂಡಕ್ಕೆ ಸ್ಕೋರ್ ಹೆಚ್ಚಿಸಲಿದ್ದಾರೆ.