ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲ 10 ತಂಡಗಳು ಟೂರ್ನಿಗಾಗಿ ಸಿದ್ಧತೆ ನಡೆಸಿವೆ. ಈ ಸಲ ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಂಟ್ಸ್ ತಂಡಗಳು ಈಗಾಗಲೇ ಜೆರ್ಸಿ ಬದಲಾವಣೆ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಸಹ ಭಾನುವಾರ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮವು ಅಭಿಮಾನಿಗಳಿಗೆ ಉತ್ಸಾಹದ ನಡುವೆ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮವು ನಾಯಕ ಫಾಫ್ ಡುಪ್ಲೆಸಿಸ್, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರ ತವರಿನ ಮೈದಾನದಲ್ಲಿ ಪುನರ್ಮಿಲನಕ್ಕೆ ಸಾಕ್ಷಿಯಾಯಿತು. ಇದೇ ವೇಳೆ ಫ್ರಾಂಚೈಸಿಯು 16ನೇ ಆವೃತ್ತಿಯ ಐಪಿಎಲ್ಗೆ ಕೇವಲ ಐದು ದಿನ ಬಾಕಿ ಇರುವಾಗಲೇ ಹೊಸ ಜೆರ್ಸಿಯನ್ನು ಪರಿಚಯಿಸಿದೆ.
ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಹೊಸ ಜೆರ್ಸಿಯೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡರು. ನೂತನ ಜೆರ್ಸಿ ಕೂಡ ಈ ಹಿಂದಿನದನ್ನೇ ಹೋಲುವಂತಿದೆ. ಗೋಲ್ಡನ್ ಲೋಗೋದೊಂದಿಗೆ ಮಾದರಿಯಲ್ಲಿ ಸ್ವಲ್ಪ ವ್ಯತ್ಯಾಸ ಇರುವುದು ಜೆರ್ಸಿಯ ಆಕರ್ಷಣೆಯನ್ನು ಹೆಚ್ಚಿಸಿದೆ. ಆದರೆ ಟ್ರ್ಯಾಕ್ ಪ್ಯಾಂಟ್ ಮತ್ತೊಮ್ಮೆ ಕೆಂಪು ಬಣ್ಣದಲ್ಲೇ ಇರಲಿದೆ.
ಇದೇ ವೇಳೆ ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಐಪಿಎಲ್‌ನಿಂದ ಅಧಿಕೃತವಾಗಿ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ತಮ್ಮ ಜೆರ್ಸಿಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಫ್ರಾಂಚೈಸಿಗಾಗಿ ಮತ್ತೊಮ್ಮೆ ಆಡುವ ಬಗ್ಗೆ ಪ್ರತಿಕ್ರಿಯಿಸಿದ ಕ್ರಿಸ್ ಗೇಲ್, "ನಾನು ಆರ್ಸಿಬಿಗಾಗಿ ಮತ್ತೆ ಆಡಲು ಸಿದ್ಧನಿದ್ದೇನೆ'' ಎಂದು ಹಾಸ್ಯ ಚಟಾಕಿ ಹಾರಿಸಿದರು. "ಸದ್ಯದ ತಂಡವು ಬಹಳ ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ. ಈಗ ನಾವು ತಂಡದಲ್ಲಿ ಆಡಲು ಫಿಟ್ ಅಲ್ಲ ಎಂದೆನಿಸುತ್ತದೆ'' ಎಂದು ಎಬಿಡಿ ಸ್ಪಷ್ಟನೆ ನೀಡಿದರು.