ಜೈಪುರ (ರಾಜಸ್ಥಾನ):ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ 52ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದು, ಆರ್ಆರ್ ತಂಡಕ್ಕೆ ಇಂದು ಜೋ ರೂಟ್ ಪಾದಾರ್ಪಣೆ ಪಂದ್ಯ ಆಡಲಿದ್ದಾರೆ. ಮಿಕ್ಕಂತೆ ಕಳೆದ ಪಂದ್ಯದ ತಂಡದಲ್ಲಿ ಆರ್ಆರ್ ಮುಂದುವರೆದಿದೆ. ಸನ್ ರೈಸರ್ಸ್ ಸಹ ಬದಲಾವಣೆ ತಂದಿದ್ದು, ಶತಕ ಗಳಿಸಿದ್ದ ಹ್ಯಾರಿ ಬ್ರೂಕ್ ಜಾಗಕ್ಕೆ ಫಿಲಫ್ಸ್ ಬಂದರೆ, ವಿವ್ರಾಂತ್ ಶರ್ಮಾ ಪಾದಾರ್ಪಣೆ ಮಾಡಲಿದ್ದಾರೆ.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಈ ಆವೃತ್ತಿಯನ್ನು ಅದ್ಭುತವಾಗಿ ಆರಂಭಿಸಿದ ಸಂಜು ಸ್ಯಾಮ್ಸನ್ ಟೀಮ್, ಇದೀಗ ಮೇಲಿಂದ ಮೇಲೆ ಸೋಲು ಕಾಣುತ್ತಿರುವುದರಿಂದ ಸಂಕಷ್ಟಕ್ಕೊಳಗಾಗಿದೆ. ಕಳೆದ ಐದು ಪಂದ್ಯಗಳಲ್ಲಿ ತಂಡವು ನಾಲ್ಕರಲ್ಲಿ ಸೋತಿದ್ದು, ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿದೆ. ಮತ್ತೊಂದೆಡೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್, ನಾಕೌಟ್ ಹಂತಕ್ಕೇರಲು ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯಲ್ಲಿದೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್, ಗುಜರಾತ್ ವಿರುದ್ಧ ಹಿನಾಯ ಸೋಲು ಕಂಡಿತ್ತು. ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ವೈಫಲ್ಯದಿಂದ ಜಿಟಿ ವಿರುದ್ಧ 118 ರನ್ ಆಲ್ಔಟ್ ಆಗಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ನಿಯಂತ್ರಿಸುವಲ್ಲಿ ರಾಜಸ್ಥಾನ ಎಡವಿತು. ಹೀಗಾಗಿ ಟೈಟಾನ್ಸ್ ಪಡೆ ಭರ್ಜರಿ ಆಟ ಆಡಿ 13.5 ಓವರ್ನಲ್ಲಿ ಪಂದ್ಯವನ್ನು 9 ವಿಕೆಟ್ಗಳಿಂದ ಗೆದ್ದು ರನ್ ರೇಟ್ ಉತ್ತಮ ಮಾಡಿಕೊಂಡು ಅಗ್ರ ಸ್ಥಾನವನ್ನು ಗಟ್ಟಿಮಾಡಿಕೊಂಡಿತ್ತು.