16 ನೇ ಆವೃತ್ತಿಯ ಐಪಿಎಲ್ ಕೊನೆಯ ಘಟ್ಟಕ್ಕೆ ಬಂದಿದೆ. ಲೀಗ್ ಹಂತದಲ್ಲಿ ಕೇವಲ ಏಳು ಪಂದ್ಯಗಳು ಉಳಿದಿದ್ದು, 18 ಅಂಕ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಕ್ವಾಲಿಫೈ ಹಂತ ತಲುಪಿದೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸತತ ಸೋಲಿನಿಂದಾಗಿ ಟೂರ್ನಿಯಿಂದ ಹೊರಬಿದ್ದಿವೆ. ಉಳಿದ ಏಳು ತಂಡಗಳ ಮಧ್ಯೆ ಮೂರು ಪ್ಲೇಆಫ್ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆದಿದೆ.
ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ, ಲಕ್ನೋ ಸೂಪರ್ ಜೈಂಟ್ಸ್ 5 ರನ್‌ಗಳ ಜಯ ಗಳಿಸುವ ಮೂಲಕ ಪ್ಲೇಆಫ್ ಸನಿಹಕ್ಕೆ ಬಂದು ನಿಂತಿದೆ. ಇದಲ್ಲದೇ, ಸೋತರೂ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಕೂಡ ರೇಸ್ನಲ್ಲಿವೆ.
13 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿರುವ ಸಿಎಸ್ಕೆ 15 ಅಂಕ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಸದ್ಯಕ್ಕೆ 2ನೇ ಸ್ಥಾನದಲ್ಲಿದೆ. ಕೊನೆಯ ಲೀಗ್ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಗೆದ್ದಲ್ಲಿ 17 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಲಿದೆ. ಇಷ್ಟಾದರೂ ಉತ್ತಮ ರನ್ರೇಟ್ ಕಾಯ್ದುಕೊಳ್ಳುವುದು ಅಗತ್ಯ. ಕಾರಣ ಇಷ್ಟೇ ಅಂಕ ಗಳಿಸಿರುವ ಲಖನೌ ಕೂಡ ಸ್ಪರ್ಧೆಯಲ್ಲಿದೆ.
15 ಅಂಕಗಳಿಂದ ಲಖನೌ ಮೂರನೇ ಸ್ಥಾನದಲ್ಲಿದೆ. ಶನಿವಾರ ನಡೆಯುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದರೆ 17 ಅಂಕಕ್ಕೆ ತಲುಪಲಿದೆ. ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ವಿರುದ್ಧ ಸೋತರೆ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ.
ಚೆನ್ನೈಗೆ ಲಖನೌ ಪೈಪೋಟಿ:ಒಂದು ವೇಳೆ ಕೋಲ್ಕತ್ತಾ ವಿರುದ್ಧ, ಲಖನೌ ಸೋತರೆ 15 ಅಂಕಗಳಲ್ಲೇ ಉಳಿಯಲಿದೆ. ಆಗ ಚೆನ್ನೈ, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್‌ನ ಫಲಿತಾಂಶ ಮೇಲೆ ಆಧಾರಿತವಾಗಲಿದೆ. ಲಖನೌಗೆ ಇರುವ ಒಂದು ಅವಕಾಶವೆಂದರೆ, ಚೆನ್ನೈ-ಡೆಲ್ಲಿ ಮಧ್ಯೆ ಪಂದ್ಯ ಮುಗಿದ ನಂತರ ಬಳಿಕ ಅದು ಕೋಲ್ಕತ್ತಾ ವಿರುದ್ಧ ಆಡಲಿದೆ. ಪಂದ್ಯದ ಫಲಿತಾಂಶ ನೋಡಿಕೊಂಡು ರನ್ರೇಟ್ ದೃಷ್ಟಿಕೋನದಿಂದ ತಂಡ ಯೋಜನೆ ರೂಪಿಸಬಹುದಾಗಿದೆ.
ಸೋತು ಪೇಚಿಗೆ ಬಿದ್ದ ಮುಂಬೈ:ಲಖನೌ ವಿರುದ್ಧ ಸೋಲುವ ಮೂಲಕ ಮುಂಬೈ ಸಂಕಷ್ಟಕ್ಕೆ ಸಿಲುಕಿದೆ. ಭಾನುವಾರ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಅದು ಗೆಲ್ಲಲೇಬೇಕು. ಅದೂ ಉತ್ತಮ ರನ್ರೇಟ್ನಿಂದ ಮಾತ್ರ. ಆದರೂ, ಆರ್ಸಿಬಿ, ಲಖನೌ, ಚೆನ್ನೈ ಮತ್ತು ಪಂಜಾಬ್‌ನ ಫಲಿತಾಂಶಗಳು ಏನೆಂಬುದರ ಮೇಲೆ ಪ್ಲೇಆಫ್ ಪ್ರವೇಶ ನಿರ್ಧಾರವಾಗಲಿದೆ. ಹಾಗೊಂದು ವೇಳೆ ಹೈದರಾಬಾದ್ ವಿರುದ್ಧ ಅಚಾನಕ್ಕಾಗಿ ಸೋತಲ್ಲಿ ಅವಕಾಶ ಮತ್ತಷ್ಟು ಕಠಿಣವಾಗಲಿದೆ.