ಲಕ್ನೋ:ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಮಂಗಳವಾರದ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತವರು ನೆಲದಲ್ಲಿ ಗೆಲುವು ಕಂಡಿತು. ಪ್ಲೇಆಫ್‌ನ ರೇಸ್‌ನಲ್ಲಿ ಉಳಿಯಲು ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಮುಂಬೈ ತಂಡವನ್ನು 5 ರನ್ಗಳಿಂದ ಮಣಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಲಕ್ನೋ ನಿಗದಿತ 20 ಓವರ್‌ಗಳಲ್ಲಿ 177 ರನ್ ಕಲೆ ಹಾಕಿತು. 178 ರನ್‌ಗಳ ಗುರಿ ಮುಟ್ಟುವ ಉತ್ಸಾಹದಲ್ಲಿ ಕಣಕ್ಕಿಳಿದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮುಂಬೈಗೆ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. 90 ರನ್‌ಗಳ ಜತೆಯಾಟ ನೀಡಿದ ಈ ಜೋಡಿ ಗೆಲುವಿನ ಮುನ್ಸೂಚನೆ ನೀಡಿದರು. ಆದರೆ, ಸ್ಪಿನ್ನರ್ ರವಿ ಬಿಷ್ನೋಯಿ ಆರಂಭಿಕರ ಆಟಕ್ಕೆ ಕಡಿವಾಣ ಹಾಕಿದರು. ರೋಹಿತ್ ಶರ್ಮಾ ಮತ್ತು ಇಶನ್ ಕಿಶನ್ ಅವರ ವಿಕೆಟ್ ಪಡೆದು ಶಾಕ್ ನೀಡಿದರು.
ಆರಂಭದಿಂದಲೂ ಬೌಲಿಂಗ್ನಲ್ಲಿ ಹಿಡಿತ ಸಾಧಿಸಲು ಪರದಾಡಿದ ಲಕ್ನೋ ಬೌಲರ್ಗಳು ಈ ಇಬ್ಬರು ಬ್ಯಾಟರ್ಗಳ ವಿಕೆಟ್ ಉರುಳಿಸಿದ ನಂತರ ಪಂದ್ಯಲ್ಲಿ ಹಿಡಿತ ಸಾಧಿಸಿದರು. ಮುಂಬೈ ಸ್ಕೋರ್ ಗಳಿಸಲು ಪರದಾಡುವಂತೆ ಬೌಲಿಂಗ್ ಮಾಡಿದರು. ಮುಂಬೈ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಸೂರ್ಯಕುಮಾರ್ ಯಾದವ್, ನೆಹಾಲ್ ವದೇರಾ, ವಿಷ್ಣು ವಿನೋದ್ರನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಬಿಡಲಿಲ್ಲ. ನಿಧಾನಗತಿ ಪಿಚ್ನಲ್ಲಿ ಟಿಮ್ ಡೇವಿಡ್ ಬೌಂಡರಿಗಳನ್ನು ಸಿಡಿಸಿ ಪಂದ್ಯವನ್ನು ಅಂತಿಮ ಹಂತದವರೆಗೆ ಕೊಂಡೊಯ್ದರು.
ರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಕೊನೆಯ ಆರು ಎಸೆತಗಳಲ್ಲಿ ಮುಂಬೈ ಗೆಲುವಿಗೆ 11 ರನ್‌ಗಳ ಅವಶ್ಯಕತೆ ಇತ್ತು. ಕ್ರೀಸ್ನಲ್ಲಿ ಟಿಮ್ ಡೇವಿಡ್ ಮತ್ತು ಕಾಮರೂನ್ ಗ್ರೀನ್ ಇದ್ದರೂ ಲಕ್ನೋ ಬೌಲರ್ ಮೊಹಿಸಿನ್ ಖಾನ್ ಉತ್ತಮ ಬೌಲಿಂಗ್ ಮಾಡಿ ಕೊನೆಯ ಓವರ್ನಲ್ಲಿ ಕೇವಲ 6 ರನ್ ಮಾತ್ರ ಬಿಟ್ಟು ಕೊಟ್ಟರು. ಈ ಮೂಲಕ ಗೆಲುವಿನ ದಡ ಸೇರಿಸಿದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಪರ ಸ್ಟೊಯಿನಿಸ್ (89), ಕೃನಾಲ್ ಪಾಂಡ್ಯ (49) ಬಿರುಸಿನ ಪ್ರದರ್ಶನದಿಂದ 3 ವಿಕೆಟ್ ನಷ್ಟಕ್ಕೆ 177 ರನ್ಗಳನ್ನು ಕಲೆ ಹಾಕಿತು. ಪಂದ್ಯಾರಂಭದಿಂದ ಬೌಲಿಂಗ್ನಲ್ಲಿ ಹಿಡಿತ ಸಾಧಿಸಿದ್ದ ಮುಂಬೈ ಕೊನೆಯ ಮೂರು ಓವರ್‌ಗಳಲ್ಲಿ 54 ರನ್ ಬಿಟ್ಟುಕೊಟ್ಟಿತು.
ಮುಂಬೈ ವಿರುದ್ಧದ ಈ ಗೆಲುವಿನೊಂದಿಗೆ ಲಕ್ನೋ ತನ್ನ ಪ್ಲೇಆಫ್ ಅವಕಾಶಗಳನ್ನು ಸುಧಾರಿಸಿತು. ಲಕ್ನೋಗೆ ಕೇವಲ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಆ ಪಂದ್ಯದಲ್ಲಿ ಗೆದ್ದರೆ ನೇರ ಪ್ಲೇ ಆಫ್ ಪ್ರವೇಶಿಸಲಿದೆ. ಲಕ್ನೋ ಪ್ರಸ್ತುತ 13 ಪಂದ್ಯಗಳಿಂದ 7 ಗೆಲುವಿನೊಂದಿಗೆ 15 ಅಂಕ ಹೊಂದಿದೆ. ಸೋಲಿನ ಸಂದರ್ಭದಲ್ಲಿ ಇತರ ತಂಡಗಳ ಅಂಕಗಳು ಮತ್ತು ನಿವ್ವಳ ರನ್ ರೇಟ್ ನಿರ್ಣಾಯಕವಾಗಿರುತ್ತದೆ. ಮುಂಬೈಗೆ ಕೇವಲ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಮುಂಬೈ 7 ಗೆಲುವಿನೊಂದಿಗೆ 14 ಅಂಕ ಹೊಂದಿದೆ. ಕೊನೆಯ ಪಂದ್ಯದಲ್ಲಿ ಗೆದ್ದರೆ ಇತರ ತಂಡಗಳ ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇ ಆಫ್ ರೇಸ್‌ನಲ್ಲಿರುತ್ತದೆ.