ದೆಹಲಿ:ಐಪಿಎಲ್ 16ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡದ ಭರ್ಜರಿ ಪ್ರದರ್ಶನ ತೋರುತ್ತಿದ್ದು, ಇಂದು ಎರಡನೇ ಗೆಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದ ಪಾಂಡ್ಯ ಪಡೆ ಬ್ಯಾಟಿಂಗ್ನಲ್ಲೂ ಉತ್ತಮ ಆಟ ಪ್ರದರ್ಶಿಸಿತು. ಇದರಿಂದ 6 ವಿಕೆಟ್ಗಳ ಗೆಲುವು ಸಾಧಿಸಿದೆ.
ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ 162 ರನ್ಗಳನ್ನು ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡದ ಆರಂಭವು ಅಷ್ಟೇನು ಉತ್ತಮವಾಗಿರಲಿಲ್ಲ. ಆರಂಭಿಕರಾದ ವೃದ್ಧಿಮಾನ್ ಸಹಾ (14) ಮತ್ತು ಶುಭಮನ್ ಗಿಲ್ (14) ಅವರನ್ನು ಅನ್ರಿಚ್ ನಾರ್ಟ್ಜೆ ಬೋಲ್ಡ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು.
ನಾಯಕ ಹಾರ್ದಿಕ್ ಪಾಂಡ್ಯ (5) ಕೂಡ ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಬೇಗನೇ ವಿಕೆಟ್ ಒಪ್ಪಿಸಿದರು. ಇದರ ನಡುವೆ ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಸಾಯಿ ಸುದರ್ಶನ್ ಜವಾಬ್ದಾರಿಯುತ ಮತ್ತು ತಾಳ್ಮೆಯ ಆಟ ಪ್ರದರ್ಶಿಸಿದರು. ಇವರಿಗೆ ವಿಜಯ್ ಶಂಕರ್ ಉತ್ತಮ ಸಾಥ್ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್ಗೆ 50 ರನ್ಗಳ ಜೊತೆಯಾಟ ನೀಡಿತು. ಆದರೆ, 29 ರನ್ ಗಳಿಸಿ ಆಡುತ್ತಿದ್ದ ಶಂಕರ್ ಅವರನ್ನು ಮಿಚೆಲ್ ಮಾರ್ಷ್ ಎಲ್ಬಿ ಬಲೆಗೆ ಕಡೆವಿದರು.
ನಂತರ ಬಂದ ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 16 ಬಾಲ್ಗಳಲ್ಲಿ ತಲಾ ಎರಡು ಬೌಂಡರಿ ಮತ್ತು ಸಿಕ್ಸರ್ಗಳ ಸಮೇತ ಅಜೇಯ 31 ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಮತ್ತೊಂಡೆದೆ, ಸಾಯಿ 48 ಎಸತೆಗಳಲ್ಲಿ ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳೊಂದಿಗೆ 62* ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.