ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯೂ ಸಹ ಸೋಲಿನೊಂದಿಗೆ ಐಪಿಎಲ್ ಅಭಿಯಾನವನ್ನು ಆರಂಭಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭಾನುವಾರ ನಡೆದ ಆರಂಭಿಕ ಪಂದ್ಯದಲ್ಲಿ 8 ವಿಕೆಟ್ಗಳ ಸೋಲು ಕಂಡಿದೆ. ಇನ್ನೊಂದೆಡೆ ತವರಿನಲ್ಲಿ ಅಬ್ಬರಿಸಿದ ಬೆಂಗಳೂರು ತಂಡ 2023ರ ಐಪಿಎಲ್ಗೆ ಭರ್ಜರಿ ಗೆಲುವಿನ ಎಂಟ್ರಿ ಕೊಟ್ಟಿದೆ. ಆರ್ಸಿಬಿ ಪರ ವಿರಾಟ್ ಕೊಹ್ಲಿ (82*) ಹಾಗೂ ನಾಯಕ ಫಾಫ್ ಡುಪ್ಲೆಸಿಸ್ (73) ಅಬ್ಬರಿಸಿದರೆ, ಮುಂಬೈನ ಸೋಲಿನ ನಡುವೆಯೂ ಕೆಲ ಯುವ ಆಟಗಾರರ ಬ್ಯಾಟಿಂಗ್ ಪ್ರದರ್ಶನವು ಮೆಚ್ಚುಗೆಗೆ ಪಾತ್ರವಾಯಿತು.
5 ಬಾರಿಯ ಚಾಂಪಿಯನ್ ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಎದೆಗುಂದದೆ ಬ್ಯಾಟ್ ಮಾಡಿದ ತಿಲಕ್ ವರ್ಮಾ (84 ರನ್, 46 ಎಸೆತ) ಹಾಗೂ ನೆಹಾಲ್ ವಧೇರಾ (21, 13 ಎಸೆತ) ಬ್ಯಾಟಿಂಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಅದರಲ್ಲೂ ಪಾದಾರ್ಪಣೆ ಪಂದ್ಯದಲ್ಲೇ ಭರ್ಜರಿ ಹೊಡೆತಗಳಿಂದ ಮಿಂಚಿದ ನೆಹಾಲ್ ಕರ್ಣ್ ಶರ್ಮಾ ಬೌಲಿಂಗ್ನಲ್ಲಿ ಒಂದರ ಹಿಂದೆ ಒಂದು ಸಿಕ್ಸರ್ ಸಿಡಿಸಿದರು. ಎರಡನೇ ಸಿಕ್ಸರ್ನಲ್ಲಿ ಚೆಂಡನ್ನು ಮೈದಾನದಿಂದ ಹೊರಗಟ್ಟಿದ ನೆಹಾಲ್ ತಮ್ಮ ಬ್ಯಾಟಿಂಗ್ ತಾಕತ್ತನ್ನು ತೋರ್ಪಡಿಸಿದರು. ನೆಹಾಲ್ ಸಿಕ್ಸರ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮೊದಲ ಪಂದ್ಯದಲ್ಲೇ 22ರ ಹರೆಯದ ಯುವ ಕ್ರಿಕೆಟರ್ ಬ್ಯಾಟಿಂಗ್ ಕೌಶಲ್ಯಕ್ಕೆ ಕ್ರಿಕೆಟ್ ಪ್ರಿಯರು ಫಿದಾ ಆಗಿದ್ದಾರೆ.
ಪಂಜಾಬ್ನ ಲುಧಿಯಾನ ಮೂಲದ ಯುವ ಕ್ರಿಕೆಟಿಗ ನೆಹಾಲ್ ವಧೇರಾ ಐಪಿಎಲ್ 2023ರ ಟೂರ್ನಿಯಲ್ಲಿ ಕೇವಲ 20 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರು ವಿರುದ್ಧ ಮುಂಬೈ ತಂಡವು 48 ರನ್ಗೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದಾಗ ಕ್ರೀಸ್ಗೆ ಬಂದ ನೆಹಾಲ್ ಜೊತೆಗಾರ ತಿಲಕ್ ವರ್ಮಾ ಜೊತೆ ಸೇರಿ 50 ರನ್ಗಳ ಅಮೂಲ್ಯ ಜೊತೆಯಾಟ ಆಡಿದರು. ಒಂದು ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 21 ರನ್ ಬಾರಿಸಿ, ತಿಲಕ್ ವರ್ಮಾಗೆ ತಕ್ಕ ಸಾಥ್ ನೀಡಿದರು.