ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ 72 ರನ್ ಗಳಿಂದ ಗೆಲ್ಲುವ ಮೂಲಕ ಶುಭಾರಂಭ ಪಡೆದಿದ್ದ ರಾಜಸ್ಥಾನ ತಂಡವು ಪಂಜಾಬ್ ವಿರುದ್ಧದ 2 ನೇ ಪಂದ್ಯದಲ್ಲಿ 5 ರನ್ಗಳಿಂದ ಸೋಲು ಅನುಭವಿಸಿತ್ತು. ಮತ್ತೆ ಪುಟಿದೆದ್ದ ರಾಜಸ್ಥಾನ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 57 ರನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ರನ್ಗಳ ಗೆಲುವು ಸಾಧಿಸಿದೆ.
ಬುಧವಾರ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯಾಟ ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಚೆನ್ನೈ ತಂಡದ ಅದ್ಭುತ ಪ್ರದರ್ಶನದ ನಡುವೆಯೂ ರಾಜಸ್ಥಾನವು ಗೆಲುವಿನ ನಗೆ ಬೀರಿತು. ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಐಪಿಎಲ್ನ 200ನೇ ಪಂದ್ಯವನ್ನು ಆಡಿದ ಧೋನಿ ಚೆನ್ನೈ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಪ್ರಯತ್ನಪಟ್ಟರು. ಆದರೆ ಸಂದೀಪ್ ಶರ್ಮಾ ಅವರು ತಮ್ಮ ಕರಾರುವಕ್ಕಾದ ಬೌಲಿಂಗ್ ದಾಳಿಯಿಂದ ಧೋನಿಯನ್ನು ಕಟ್ಟಿ ಹಾಕುವಲ್ಲಿ ಯಶ ಸಾಧಿಸಿದರು. ಈ ಗೆಲುವಿನೊಂದಿಗೆ ರಾಜಸ್ಥಾನ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ಕೂಡ ರಾಜಸ್ಥಾನದಷ್ಟೇ ಪಂದ್ಯಗಳನ್ನು ಗೆದ್ದಿದ್ದು, ರನ್ ರೇಟ್ ಕಡಿಮೆ ಇರುವುದರಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.
ಕೋಲ್ಕತ್ತಾ ಪಂದ್ಯದಲ್ಲಿ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿ ತಂಡವನ್ನು ಗೆಲ್ಲಿಸಿದಂತೆಯೇ ರಾಜಸ್ಥಾನದ ವಿರುದ್ಧ ಫಿನಿಷರ್ ಧೋನಿ ಮ್ಯಾಜಿಕ್ ಮಾಡಿ ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ ಎಂದು ನಂಬಿಕೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವಲ್ಲಿ ರಾಜಸ್ಥಾನ ಸಫಲವಾಯಿತು.
ಧೋನಿ ಕ್ರೀಸ್‌ಗೆ ಬಂದಾಗ ಚೆನ್ನೈ ಪರಿಸ್ಥಿತಿ ಹೀಗಿತ್ತು..:ಧೋನಿ ಕ್ರೀಸಿಗೆ ಬಂದಾಗ ಚೆನ್ನೈ ತಂಡಕ್ಕೆ 30 ಎಸೆತಗಳಲ್ಲಿ 63 ರನ್ಗಳ ಅಗತ್ಯತೆ ಇತ್ತು. ಧೋನಿ ತಂಡಕ್ಕಾಗಿ ದೊಡ್ಡ ಹೊಡೆತಗಳಿಗೆ ಕೈ ಹಾಕುವ ಅವಶ್ಯಕತೆ ಹೆಚ್ಚಿತ್ತು. ಅಲ್ಲಿಯವರೆಗೆ ಸ್ಪಿನ್ ಬೌಲರ್ಗಳು ತಮ್ಮ ಪಾತ್ರ ನಿರ್ವಹಿಸಿ, ಸಿಎಸ್ಕೆ ಬ್ಯಾಟರ್ಗಳನ್ನು ಕಾಡುವಲ್ಲಿ ಯಶಸ್ವಿಯಾಗಿದ್ದರು. ಧೋನಿ ಮತ್ತು ಜಡೇಜಾ ಜೊತೆಯಾದಾಗ ಚೆನ್ನೈ ತಂಡಕ್ಕೆ ಅಂತಿಮವಾಗಿ 2 ಓವರ್ಗಳಲ್ಲಿ 40 ರನ್ಗಳ ಅವಶ್ಯಕತೆ ಇತ್ತು.