ತೆಲಂಗಾಣ (ಹೈದರಾಬಾದ್): 16ನೇ ಐಪಿಎಲ್ಗೆ ವೇದಿಕೆ ಸಿದ್ಧಗೊಂಡಿದ್ದು ತನ್ನ ಆರಂಭದ ಪಂದ್ಯದಲ್ಲೇ ಸನ್ ರೈಸರ್ಸ್ ಹೈದರಾಬಾದ್ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಕಾರಣಾಂತರಗಳಿಂದ ತಂಡದ ನಾಯಕ ಏಡೆನ್ ಮಾರ್ಕ್ರಾಮ್, ಮೊದಲ ಪಂದ್ಯಕ್ಕೆ ಗೈರಾಗಲಿದ್ದು, ಅವರ ಸ್ಥಾನವನ್ನು ಭಾರತೀಯ ವೇಗಿ ಭುವನೇಶ್ವರ್ ಕುಮಾರ್ ತುಂಬಲಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣಲ್ಲಿ ಏಪ್ರಿಲ್ 2 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಕಣಕ್ಕಿಳಿಯಲಿದೆ. ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್, ನೆದರ್ಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಆಡುತ್ತಿರುವುದರಿಂದ ಎಸ್ಆರ್ಹೆಚ್ ತಂಡದ ಮೊದಲ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ. ಹಾಗಾಗಿ ಅವರ ನಾಯಕತ್ವದ ಸ್ಥಾನವನ್ನು ವೇಗಿ ಭುವನೇಶ್ವರ್ ಕುಮಾರ್ ತುಂಬಲಿದ್ದಾರೆ.
ಆವೃತ್ತಿಯ ವೇಳಾ ಪಟ್ಟಿಗೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ನಾಯಕನ ಜವಾಬ್ದಾರಿಯನ್ನು ತಂಡದ ಪ್ರಾಂಚೈಸಿ ಏಡೆನ್ ಮಾರ್ಕ್ರಾಮ್ ಅವರಿಗೆ ವಹಿಸಲಾಗಿತ್ತು. ಆದರೆ, ಅವರು ನೆದರ್ಲ್ಯಾಂಡ್ ವಿರುದ್ಧದ ಮುಂಬರುವ ಎರಡು ಏಕದಿನ ಪಂದ್ಯಗಳನ್ನು ಆಡಲಿದ್ದು ಈ ಸರಣಿ ಮುಕ್ತಾಯವಾದ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ.
ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ ನೇರ ಅರ್ಹತೆ ಪಡೆಯಬೇಕೆಂದರೆ ಈ ಸರಣಿಯನ್ನು (ಯಾವುದೇ ಓವರ್-ರೇಟ್ ಪೆನಾಲ್ಟಿಗಳಿಲ್ಲದೆ) ಗೆಲ್ಲಲೇಬೇಕು. ಸರಣಿ ನಿರ್ಣಾಯಕವಾಗಿದ್ದರಿಂದ ಮತ್ತು ತಂಡದ ಭವಿಷ್ಯದ ಆಟಗಾರ ಆಗಿದ್ದರಿಂದ ಏಡೆನ್ ಮಾರ್ಕ್ರಾಮ್ ಅಲ್ಲಿ ಆಡಲೇಬೇಕು. ನೆದರ್ಲ್ಯಾಂಡ್ ವಿರುದ್ಧ ಎರಡೂ ಏಕದಿನ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. ತಂಡಕ್ಕೆ ಮಾರ್ಕ್ರಾಮ್ ಅವರ ಅನಿವಾರ್ಯತೆ ಹೆಚ್ಚಿದ್ದರಿಂದ ಅವರನ್ನು ಅಲ್ಲಿಯೇ ಉಳಿಸಿಕೊಳ್ಳಲಾಗಿದೆ.
2013 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡ ಭುವನೇಶ್ವರ್ ಕುಮಾರ್, 2019 ರಲ್ಲಿ ಆರು ಪಂದ್ಯಗಳಲ್ಲಿ ಮತ್ತು 2022 ರ ಆವೃತ್ತಿಯಲ್ಲಿ ಒಂದು ಬಾರಿ ತಂಡದ ನಾಯಕತ್ವ ವಹಿಸಿರುವ ಅನುಭವ ಹೊಂದಿದ್ದಾರೆ. ತಂಡದ ನಾಯಕತ್ವ ವಹಿಸಿಕೊಂಡ ಭುವನೇಶ್ವರ್ ಕುಮಾರ್ ಒಟ್ಟು 7 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ 5 ಪಂದ್ಯಗಳಲ್ಲಿ ಸೋತರೆ, ಎರಡು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿತ್ತು.
ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸನ್ ರೈಸರ್ಸ್ ಹೈದರಾಬಾದ್, ಪ್ಲೇ ಆಫ್ ತಲುಪಲು ಕೂಡ ವಿಫಲವಾಗಿತ್ತು. ಅದಕ್ಕಾಗಿಯೇ ನಾಯಕ ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್ ಸೇರಿದಂತೆ ಹಲವು ಆಟಗಾರರನ್ನು ಮಿನಿ ಹರಾಜಿಗೆ ಮುನ್ನ ಬಿಡುಗಡೆ ಮಾಡಿತ್ತು. ಸದ್ಯ ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಮತ್ತೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಎಸ್‌ಎ 20 ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿ ಗಮನ ಸೆಳೆದ ಮಾರ್ಕ್ರಾಮ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿತ್ತು. ಸದ್ಯ ಅವರು ಸಹ ಮೊದಲ ಪಂದ್ಯಕ್ಕೆ ಅಲಭ್ಯವಾಗುತ್ತಿದ್ದಾರೆ.
ಮಾರ್ಕ್ರಾಮ್ ಹೊರತುಪಡಿಸಿ, ಮಾರ್ಕೊ ಜಾನ್ಸೆನ್ ಮತ್ತು ಹೆನ್ರಿಕ್ ಕ್ಲಾಸೆನ್ ಕೂಡ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ ಬಹು ನಿರೀಕ್ಷಿತ ಸೀಸನ್ ನಾಳೆ (ಮಾ. 31) ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ನಾಳೆ ನಡೆಯಲಿರುವ ಜಿದ್ದಾಜಿದ್ದಾ ಕಾಳಗಕ್ಕೆ ಅಭಿಮಾನಿಗಳು ಕೂಡ ಕಾತುರತೆಯಿಂದ ಕಾಯುತ್ತಿದ್ದಾರೆ.