ಮುಂಬೈ:ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ ಸಾಧಾರಣ ಮೊತ್ತವನ್ನು ಹಾರ್ದಿಕ್ ಪಾಂಡ್ಯ ಬಳಗವು ಸುಲಭವಾಗಿ ಬೆನ್ನಟ್ಟಿದೆ. ಗುಜರಾತ್ ಟೈಟನ್ಸ್ ತಂಡವು ಏಳು ವಿಕೇಟ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಗ್ರಸ್ಥಾನ ಭದ್ರ ಪಡಿಸಿಕೊಂಡಿರುವ ಟೈಟನ್ಸ್ 'ಕ್ವಾಲಿಫೈಯರ್ 1' ನಲ್ಲಿ ಆಡುವುದು ಪಕ್ಕಾ ಆಗಿದೆ.
ಚೆನ್ನೈ ತಂಡ ನೀಡಿದ್ದ 133 ರನ್‌ಗಳ ಗುರಿಯನ್ನು ವೃದ್ಧಿಮಾನ್ ಸಹಾ ಅಜೇಯ 67 ರನ್ನ ಸಹಾಯದಿಂದ 3 ವಿಕೇಟ್ ನಷ್ಟಕ್ಕೆ ಗಳಿಸಲು ಸಾಧ್ಯವಾಯಿತು. ಐದು ಬಾಲ್ ಬಾಕಿ ಇರುವಾಗಲೇ ಪಂದ್ಯವನ್ನು ಟೈಟನ್ಸ್ ಗೆದ್ದು ಬೀಗಿತು. ಸಹಾ ಮತ್ತು ಗಿಲ್(18) ಮೊದಲ ವಿಕೇಟ್ಗೆ 59 ರನ್ನ ಜೊತೆಯಾಟ ನೀಡಿದರು. ಗಿಲ್ ವಿಕೇಟ್ ನಂತರ ಮ್ಯಾಥ್ಯೂ ವೇಡ್ 20 ರನ್‌ಗಳ ಕಾಣಿಕೆ ನೀಡಿದರು. ಹಾರ್ದಿಕ್ ಪಾಂಡ್ಯ 7 ಹಾಗೂ ಡೇವಿಡ್ ಮಿಲ್ಲರ್ ಅಜೇಯ 15 ರನ್ ಗಳಿಸಿದರು. ಸಹಾ 8 ಬೌಂಡರಿ ಮತ್ತು ಒಂದು ಸಿಕ್ಸರ್ನ ಸಹಾಯದಿಂದ 67 ರನ್ ಗಳಿಸಿ ಅಜೇಯರಾಗಿ ಉಳಿದರು.
ಚೆನ್ನೈ ಪರ ಮಥೀಶ ಪತಿರಾನ್ 2 ವಿಕೇಟ್ ಮತ್ತು ಮೊಯಿನ್ ಅಲಿ ಒಂದು ವಿಕೆಟ್ ಗಳಿಸಿದರು. ಗುಜರಾತ್ ಆಡಿರುವ 13 ಪಂದ್ಯಗಳಲ್ಲಿ 10ನೇ ಗೆಲುವಿನೊಂದಿಗೆ ಒಟ್ಟು 20 ಅಂಕ ಗಳಿಸಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ. ಅತ್ತ ಚೆನ್ನೈ 13 ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲೇ ಉಳಿದುಕೊಂಡಿದೆ.