ಕೋಲ್ಕತ್ತಾ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ರಜತ್ ಪಾಟಿದಾರ್ ಎಂಬ ಕ್ರಿಕೆಟರ್ ಒಬ್ಬ ಇದ್ದಾನೆಂಬುದು ಅದೆಷ್ಟೋ ಜನರಿಗೆ ಗೊತ್ತೇ ಇರಲಿಲ್ಲ. ಆದರೆ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಲಕ್ಷಾಂತರ ಕ್ರೀಡಾಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಇದರ ಜೊತೆಗೆ ತಮ್ಮಲ್ಲಿರುವ ಬ್ಯಾಟಿಂಗ್ ಪ್ರತಿಭೆ ಹೊರಹಾಕಿ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ರಜತ್ ಆರ್ಸಿಬಿ ತಂಡ ಸೇರಿದ್ದು ರೋಚಕ:ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಲ್ಲಿ ರಜತ್ ಪಾಟಿದಾರ್ ಅನ್ಸೋಲ್ಡ್ ಆಗಿದ್ದರು. ಹೀಗಾಗಿ, ಅವರ ಮದುವೆ ದಿನಾಂಕ ನಿಗದಿಪಡಿಸಿ, ಅದಕ್ಕೋಸ್ಕರ ತಯಾರಿ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಆರ್ಸಿಬಿ ಕಡೆಯಿಂದ ತಡವಾಗಿ ಕರೆ ಸ್ವೀಕರಿಸುತ್ತಿದ್ದಂತೆ ಮದುವೆ ದಿನಾಂಕ ಮುಂದೂಡಿಕೆ ಮಾಡಿ, ಫ್ರಾಂಚೈಸಿ ಸೇರಿಕೊಳ್ಳುತ್ತಾರೆ. ಇದೀಗ ಅಬ್ಬರಿಸಿ, ತಮ್ಮ ಸ್ಫೋಟಕ ಪ್ರದರ್ಶನ ಹೊರಹಾಕಿದ್ದಾರೆ.
ಇದನ್ನೂ ಓದಿ:ಸಿಕ್ಸ್-ಫೋರ್ಗಳ ಸುರಿಮಳೆ ಹರಿಸಿದ ರಜತ್... ಆರ್ಸಿಬಿ ಅನ್ಕ್ಯಾಪ್ಡ್ ಪ್ಲೇಯರ್ ದಾಖಲೆ
2021ರ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದ ರಜತ್ 4 ಪಂದ್ಯಗಳಿಂದ ಕೇವಲ 71ರನ್ಗಳಿಕೆ ಮಾಡಿದ್ದರು. ಹೀಗಾಗಿ, ಫ್ರಾಂಚೈಸಿ ಕೈಬಿಟ್ಟಿತ್ತು. ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದ ಕಾರಣ ಮೇ 9ರಂದು ಮದುವೆ ದಿನಾಂಕ ಸಿದ್ಧಪಡಿಸಿದ್ದರು. ಇದರ ಮಧ್ಯೆ ಲುಮ್ನಿತ್ ಸಿಸೋಡಿಯಾ ಗಾಯಗೊಳ್ಳುತ್ತಿದ್ದಂತೆ ಪಾಟಿದಾರ್ ಬದಲಿ ಆಟಗಾರನಾಗಿ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಆರ್ಸಿಬಿ ಸೇರಿಕೊಳ್ಳುತ್ತಾರೆ.
ಕೆಲವೊಂದು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾದರೂ, ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದರು. ಈ ಮೂಲಕ ಎಲ್ಲರ ಮನದಲ್ಲೂ ಉಳಿದುಕೊಂಡಿದ್ದಾರೆ. ತಾವು ಎದುರಿಸಿದ 54 ಎಸೆತಗಳಲ್ಲಿ ಅಜೇಯ 112ರನ್ಗಳಿಕೆ ಮಾಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇವರ ಬ್ಯಾಟಿಂಗ್ ವೈಖರಿಗೆ ಫಿದಾ ಆಗಿರುವ ವಿರಾಟ್ ಕೊಹ್ಲಿ, ಖಂಡಿತವಾಗಿ ಪಾಟಿದಾರ್ ಟೀಂ ಇಂಡಿಯಾದ ಸೂಪರ್ ಕ್ರಿಕೆಟರ್ ಆಗಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ. ಮಧ್ಯಪ್ರದೇಶದ ಪರ ಆಡುತ್ತಿರುವ ಪಾಟಿದಾರ್, ರಣಜಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಅದ್ಭುತ ಪ್ರದರ್ಶನನೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಶತಕ ಸಿಡಿಸಿರುವ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಜತ್ ಪಾಟಿದಾರ್, ಪ್ಲೇ-ಆಫ್ ಹಂತದಲ್ಲಿ ಆರ್ಸಿಬಿ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಗೂ ರಜತ್ ಪಾತ್ರರಾದರು. ಇವರ ಬ್ಯಾಟಿಂಗ್ ವೈಖರಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ಗಳಾದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.