ಕೋಲ್ಕತ್ತಾ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್ಕ್ಯಾಪ್ಡ್ ಪ್ಲೇಯರ್ ರಜತ್ ಪಾಟಿದಾರ್ ಹೊಸದಾಖಲೆ ಬರೆದಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಕ್ಸ್-ಫೋರ್ಗಳ ಸುರಿಮಳೆಯನ್ನೇ ಹರಿಸಿದ ಈ ಪ್ಲೇಯರ್ ಅಜೇಯ 112ರನ್ ಸಿಡಿಸಿ ಮಿಂಚಿದರು. ಈ ಮೂಲಕ ಚೊಚ್ಚಲ ಶತಕ ಸಾಧನೆ ಮಾಡಿದರು.
ಡುಪ್ಲೆಸಿಸ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕೆ ಬಂದ ರಜತ್, ಕೇವಲ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದಾದ ಬಳಿಕ ಅಬ್ಬರಿಸಿದ ಪಾಟಿದಾರ್ ತಾವು ಎದುರಿಸಿದ 49 ಎಸೆತಗಳಲ್ಲಿ ಚೊಚ್ಚಲ ಶತಕ ಪೂರ್ಣಗೊಳಿಸಿದರು. ಅಜೇಯರಾಗಿ ಉಳಿದ ಈ ಪ್ಲೇಯರ್ ತಾವು ಎದುರಿಸಿದ 54 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್, 12 ಬೌಂಡರಿ ಸಮೇತ 112ರನ್ಗಳಿಸಿದರು.
ಈ ಮೂಲಕ ಪ್ರಸಕ್ತ ಐಪಿಎಲ್ನಲ್ಲಿ ಆರ್ಸಿಬಿ ಪರ ಶತಕ ಸಿಡಿಸಿರುವ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2022ರ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಯಾವುದೇ ಬ್ಯಾಟರ್ ಮೂರಂಕಿ ರನ್ಗಳಿಕೆ ಮಾಡಿಲ್ಲ. ಇನ್ನೂ ಪ್ಲೇ-ಆಫ್ ಹಂತದಲ್ಲಿ ಆರ್ಸಿಬಿ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಗೂ ರಜತ್ ಪಾತ್ರರಾದರು.
ಐಪಿಎಲ್ ಇತಿಹಾಸದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾಟಿದಾರ್ ಪಾತ್ರರಾಗಿದ್ದು, ಪ್ಲೇ-ಆಫ್ ಹಂತದಲ್ಲಿ ಸೆಂಚುರಿ ಬಾರಿಸಿದ 5ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇನ್ನೂ ಐಪಿಎಲ್ನಲ್ಲಿ ಅನ್ಕ್ಯಾಪ್ಡ್ ಬ್ಯಾಟರ್ ಆಗಿ ಶತಕ ಸಿಡಿಸಿರುವ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾಟಿದಾರ್ ಪಾತ್ರರಾಗಿದ್ದಾರೆ. ಈಗಾಗಲೇ ಮನೀಷ್ ಪಾಂಡೆ 2009, ದೇವದತ್ ಪಡಿಕ್ಕಲ್ 2021ರಲ್ಲಿ ಈ ಸಾಧನೆ ಮಾಡಿದ್ದಾರೆ.
ವಿಶೇಷವೆಂದರೆ ಮಹತ್ವದ ಪಂದ್ಯದಲ್ಲಿ ತಂಡದ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಮ್ಯಾಕ್ಸ್ವೆಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ, ನಿರಾಸೆ ಮೂಡಿಸಿದರು.