ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ ಗುಜರಾತ್ ಟೈಟನ್ಸ್ ಮೊದಲ ತಂಡವಾಗಿ ಪ್ಲೇ-ಆಫ್ಗೆ ಪ್ರವೇಶ ಪಡೆದುಕೊಂಡಿದೆ. ಉಳಿದ ಮೂರು ಸ್ಥಾನಕ್ಕೆ ಈಗಲೂ ಜಿದ್ದಾಜಿದ್ದಿ ಮುಂದುವರೆದಿದ್ದು, ಒಟ್ಟು ಏಳು ತಂಡಗಳು ರೇಸ್ನಲ್ಲಿವೆ. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಈಗಾಗಲೇ ಈ ರೇಸ್ನಿಂದ ಹೊರಬಿದ್ದಿವೆ.
ನಿನ್ನೆ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸುವುದರೊಂದಿಗೆ ಈ ರೇಸ್ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಆರ್ಸಿಬಿ ಸೇರಿದಂತೆ ನಾಲ್ಕು ತಂಡಗಳು 4ನೇ ಸ್ಥಾನಕ್ಕಾಗಿ ಹೋರಾಟ ನಡೆಸಿರುವುದು ಮಾತ್ರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ 17ರನ್ಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದು, ಇದು ಆರ್ಸಿಬಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
ವಿವಿಧ ತಂಡಗಳು ಗಳಿಸಿರುವ ಪಾಯಿಂಟ್ ಈ ರೀತಿ.. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಸದ್ಯ 16 ಪಾಯಿಂಟ್ ಹೊಂದಿದೆ. ಈ ತಂಡ ಉತ್ತಮ ಸ್ಥಿತಿಯಲ್ಲಿದ್ದರೂ ಕೂಡ ಪ್ಲೇಆಫ್ ಟಿಕೆಟ್ ಕನ್ಫರ್ಮ್ ಆಗಿಲ್ಲ. ಹೀಗಾಗಿ, ಮುಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಆದರೆ, ನೆಟ್ ರನ್ರೇಟ್ ಉತ್ತಮವಾಗಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಇದನ್ನೂ ಓದಿ:'ಹಾಲ್ ಆಫ್ ಫೇಮ್' ಗೌರವಕ್ಕೆ ಎಬಿಡಿ,ಗೇಲ್.. IPL ಇತಿಹಾಸದಲ್ಲಿ ವಿಶೇಷ ಪ್ರಶಸ್ತಿ ಪರಿಚಯಿಸಿದ ಆರ್ಸಿಬಿ
ದೆಹಲಿ ಕ್ಯಾಪಿಟಲ್ಸ್:ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ಪಂದ್ಯಗಳ ಪೈಕಿ 7ರಲ್ಲಿ ಗೆದ್ದು 14 ಪಾಯಿಂಟ್ ಹೊಂದಿದೆ. ಇದೀಗ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಪ್ಲೇ-ಆಫ್ಗೆ ಪ್ರವೇಶ ಪಡೆದುಕೊಳ್ಳಲಿದೆ. ಈ ತಂಡದ ರನ್ರೇಟ್ ಕೂಡ ಉತ್ತಮವಾಗಿರುವುದು, ಆರ್ಸಿಬಿ ತಂಡಕ್ಕೆ ತಲೆನೋವಾಗಿದೆ. ಇನ್ನೂ ರಾಜಸ್ಥಾನ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಮುಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಬೇಕಾಗಿದೆ.
ಪಂಜಾಬ್ ಕಿಂಗ್ಸ್: ಡೆಲ್ಲಿ ವಿರುದ್ಧ ಸೋಲು ಕಂಡಿರುವ ಪಂಜಾಬ್ ಬಹುತೇಕ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದೆ. ಆದರೆ, ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಇದರ ಹೊರತಾಗಿ ಕೂಡ ಇತರ ತಂಡಗಳ ಫಲಿತಾಂಶದ ಮೇಲೆ ಇದರ ಪ್ಲೇ-ಆಫ್ ಭವಿಷ್ಯ ನಿಂತಿದೆ.
ಬೆಂಗಳೂರು:ಕಳೆದ ಕೆಲ ಪಂದ್ಯಗಳಲ್ಲಿ ಸತತ ಸೋಲಿನಿಂದಾಗಿ ಆರ್ಸಿಬಿ ಪ್ಲೇ-ಆಫ್ ಹಾದಿ ಕಷ್ಟಕರವಾಗಿದೆ. 14 ಪಾಯಿಂಟ್ ಹೊಂದಿರುವ ಆರ್ಸಿಬಿ ಮುಂದಿನ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆದ್ದರೆ 16 ಪಾಯಿಂಟ್ ಗಳಿಕೆ ಮಾಡಲಿದೆ, ಆದರೆ, ನೆಟ್ ರನ್ರೇಟ್ -0.323 ಆಗಿರುವುದು ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಕೋಲ್ಕತ್ತಾ ತಂಡ ಕೂಡ 12 ಪಾಯಿಂಟ್ ಹೊಂದಿದ್ದು, ಇದೀಗ ಕೇವಲ ಒಂದು ಪಂದ್ಯ ಬಾಕಿ ಇರುವ ಕಾರಣ ಅದರಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ. ಹೈದರಾಬಾದ್ ತಂಡದ ಪರಿಸ್ಥಿತಿ ಕೂಡ ಇದೇ ರೀತಿ ಇದ್ದು, ಮುಂಬೈ ವಿರುದ್ಧ ಗೆಲುವು ಅನಿವಾರ್ಯವಾಗಿದೆ.