ಮುಂಬೈ :ಲಖನೌ ಸೂಪರ್ ಜೈಂಟ್ಸ್ ತಂಡದ ಬೌಲರ್ಗಳ ಸಂಘಟಿತ ದಾಳಿಗೆ ರನ್ಗಳಿಸಲು ಪರದಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 149 ರನ್ಗಳಿಸಿತ್ತು. ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ಕನ್ನಡಿಗ ರಾಹುಲ್ ಬಳಗ ಡೆಲ್ಲಿ ವಿರುದ್ಧ ಕೊನೆಯ ಓವರ್ನಲ್ಲಿ ಜಯ ಸಾಧಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ : ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಎಲ್ಎಸ್ಜಿ ನಾಯಕ ರಾಹುಲ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ವಿಕೆಟ್ಗೆ 7.3 ಓವರ್ಗಳಲ್ಲಿ 67 ರನ್ಗಳಿಸಿತ್ತು.
ಯುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಕೇವಲ 34 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 61 ರನ್ಗಳಿಸಿದರು. ಆದರೆ, ಇವರ ಜೊತೆಗಾರ ಡೇವಿಡ್ ವಾರ್ನರ್ 12 ಎಸೆತಗಳಲ್ಲಿ ಕೇವಲ 4 ರನ್ಗಳಿಸಿದರು. ಈ ಇಬ್ಬರು ಒಂದು ಓವರ್ ಅಂತರದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ಓದಿ:'ಪಾಕ್ ವಿರುದ್ಧ ಆ ಪಂದ್ಯದಲ್ಲಿ ಧೋನಿ ನನಗೆ ಚೆಂಡು ನೀಡಿದಾಗ ನಡುಕ ಶುರುವಾಗಿತ್ತು! ಆದರೆ...'
ಆರಂಭಿಕ ಜೋಡಿ ಬೇರ್ಪಡುತ್ತಿದ್ದಂತೆ ಡೆಲ್ಲಿ ತಂಡದ ರನ್ಗತಿ ಇಳಿಮುಖವಾಯಿತು. ರೋವ್ಮನ್ ಪೊವೆಲ್ 10 ಎಸೆತಗಳಲ್ಲಿ 3 ರನ್ಗಳಿಸಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ರಿಷಭ್ ಪಂತ್ ಕೂಡ ರನ್ಗಳಿಸಲು ಪರದಾಟ ನಡೆಸಿದರು. ಅವರು ಮೊದಲ 20 ಎಸೆತಗಳಲ್ಲಿ ಕೇವಲ 14 ರನ್ಗಳಿಸಿದ್ದರು. ಆದರೆ, ಕೊನೆಯ 4 ಓವರ್ಗಳಿದ್ದ ಸಂದರ್ಭದಲ್ಲಿ ಸರ್ಫರಾಜ್ ಖಾನ್ ಜೊತೆಗೂಡಿ ಬಿರುಸಿನ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು 150ರ ಸನಿಹ ತಂದರು.
ಪಂತ್ 36 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 39 ರನ್ಗಳಿಸಿದರೆ, ಸರ್ಫರಾಜ್ ಖಾನ್ 28 ಎಸೆತಗಳಲ್ಲಿ 3 ಬೌಂಡರಿ ಸಹಿತ 36 ರನ್ಗಳಿಸಿ ಅಜೇಯರಾಗುಳಿದರು. ಲಖನೌ ಸೂಪರ್ ಜೈಂಟ್ಸ್ ಪರ ರವಿ ಬಿಷ್ಣೋಯ್ 22ಕ್ಕೆ 2, ಕೆ.ಗೌತಮ್ 23ಕ್ಕೆ 1ವಿಕೆಟ್ ಪಡೆದು ರನ್ ಗಳಿಸದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಟ್ಟಿ ಹಾಕಿದ್ದರು.
ಲಖನೌ ಸೂಪರ್ ಜೈಂಟ್ಸ್ ಇನ್ನಿಂಗ್ಸ್ :ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಗುರಿಯನ್ನು ಬೆನ್ನತ್ತಿದ್ದ ಲಖನೌ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕ ಆಟಗಾರರಾದ ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಇಬ್ಬರು ಜೊತೆಗೂಡಿ 73 ರನ್ಗಳನ್ನು ಕಲೆ ಹಾಕಿದರು. ಬಳಿಕ ಕೆ.ಎಲ್ ರಾಹುಲ್ 24 ರನ್ ಗಳಿಸಿ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಬಂದ ಎವಿನ್ ಲೆವಿಸ್ ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯದೇ 5 ರನ್ಗಳನ್ನು ಕಲೆ ಹಾಕಿ ಔಟಾದಾರು.
ಓದಿ:ಸಾರ್ವಕಾಲಿಕ ಏಕದಿನ ಶ್ರೇಯಾಂಕ ಪಟ್ಟಿ: ಸಚಿನ್ ಹಿಂದಿಕ್ಕಿದ ಬಾಬರ್ ಅಜಮ್
ಇನ್ನು ಕ್ವಿಂಟನ್ ಡಿ ಕಾಕ್ ಮಾತ್ರ ತಮ್ಮ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ್ರು. 80 ರನ್ಗಳನ್ನು ಗಳಿಸಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಡಿ ಕಾಕ್ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನ ಹಿಂದೆನೇ 11 ರನ್ ಗಳಿಸಿದ್ದ ದೀಪಕ್ ಹೂಡಾ ಸಹಿತ ಔಟಾದರು. ಬಳಿಕ ಬಂದ ಕುರ್ನಾಲ್ ಪಾಂಡ್ಯಾ (19 ರನ್) ಮತ್ತು ರವಿ ಬಿಷ್ಣೋಯ್ (10) ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ತಂಡ 19.4 ಓವರ್ಗಳಿಗೆ 4 ವಿಕೆಟ್ಗಳ ನಷ್ಟಕ್ಕೆ 155 ರನ್ ಬಾರಿಸುವ ಮೂಲಕ ಜಯ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್ದೀಪ್ ಯಾದವ್ 31 ರನ್ ನೀಡಿ 2 ವಿಕೆಟ್ ಪಡೆದ್ರೆ, ಲಲಿತ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.
ಇಂದು ಸಂಜೆ 7.30ಕ್ಕೆ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಸೆಣಸಾಟ ನಡೆಸಲಿದೆ.