ಕೋಲ್ಕತ್ತಾ:15ನೇ ಆವೃತ್ತಿ ಐಪಿಎಲ್ನಲ್ಲಿ ನಾಟಕೀಯ ಲೆಕ್ಕಾಚಾರದ ಮೇಲೆ ಪ್ಲೇ - ಆಫ್ ಹಂತಕ್ಕೆ ಲಗ್ಗೆ ಹಾಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಎಲಿಮಿನೇಟರ್ ಪಂದ್ಯದಲ್ಲಿ ಕನ್ನಡಿಗ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕಾದಾಟ ನಡೆಸಲಿದೆ.
ರಾಹುಲ್ ನಾಯಕತ್ವದಲ್ಲಿ ಲಖನೌ ಸೂಪರ್ ಜೈಂಟ್ಸ್ ಇದೇ ಮೊದಲ ಸಲ ಐಪಿಎಲ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದು, ಲೀಗ್ ಹಂತದಲ್ಲಿ ತಾನು ಆಡಿರುವ 14 ಪಂದ್ಯಗಳ ಪೈಕಿ 9ರಲ್ಲಿ ಗೆಲುವು ದಾಖಲು ಮಾಡಿ 3ನೇ ತಂಡವಾಗಿ ಪ್ಲೇ - ಆಫ್ ಪ್ರವೇಶ ಪಡೆದುಕೊಂಡಿದೆ. ಉತ್ತಮ ಫಾರ್ಮ್ನಲ್ಲಿರುವ ನಾಯಕ ರಾಹುಲ್ ಹಾಗೂ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಈಗಾಗಲೇ ಶತಕ ಸಿಡಿಸಿ, ಮಿಂಚು ಹರಿಸಿದ್ದು, ಹಿಂದಿನ ಪಂದ್ಯದಲ್ಲಿ ಡಿಕಾಕ್ - ರಾಹುಲ್ ಜೋಡಿ ದ್ವಿಶತಕದಾಟ ಆಡಿದ್ದರು.
ಇವರಿಗೆ ಎವಿನ್ ಲೂಯಿಸ್, ದೀಪಕ್ ಹೂಡಾ, ಆಲ್ರೌಂಡರ್ ಸ್ಟೋಯಿನಿಸ್ ಮತ್ತು ಜೇಸನ್ ಹೋಲ್ಡರ್ ಉತ್ತಮ ಸಾಥ್ ನೀಡುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದ್ದು, ಆವೇಶ್ ಖಾನ್, ಮೊಸೀನ್ ಖಾನ್, ಸ್ಪಿನ್ನರ್ ರವಿ ಬಿಷ್ಣೋಯ್ ತಂಡಕ್ಕೆ ಮೆಲುಗೈ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ವಿಶೇಷ ಎಂದರೆ ಲೀಗ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಆರ್ಸಿಬಿ 18ರನ್ಗಳ ಗೆಲುವು ದಾಖಲು ಮಾಡಿದೆ.