ಮುಂಬೈ:ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ವಿರುದ್ಧ ಕೇವಲ 2ರನ್ಗಳ ಅಂತರದ ರೋಚಕ ಗೆಲುವು ದಾಖಲು ಮಾಡಿರುವ ಲಖನೌ ಸೂಪರ್ ಜೈಂಟ್ಸ್ ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಗುಜರಾತ್ ಬಳಿಕ ಎರಡನೇ ತಂಡವಾಗಿ ಮುಂದಿನ ಹಂತಕ್ಕೆ ಲಗ್ಗೆ ಹಾಕಿರುವ 2ನೇ ತಂಡವಾಗಿ ಹೊರಹೊಮ್ಮಿದೆ. ಅತ್ತ ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಸೋಲಿನೊಂದಿಗೆ ಅಭಿಯಾನ ಮುಗಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಕ್ಯಾಪ್ಟನ್ ರಾಹುಲ್ ಹಾಗೂ ಡಿಕಾಕ್ ಉತ್ತಮ ಜೊತೆಯಾಟವಾಡಿದರು. ವಿಕೆಟ್ ಪತನಗೊಳ್ಳದಂತೆ ನಿಗಾ ವಹಿಸಿದ ಈ ಜೋಡಿ ಎದುರಾಳಿ ಬೌಲರ್ಗಳನ್ನ ದಂಡಿಸಿದರು. ಕೊನೆ ಓವರ್ವರೆಗೆ ಬ್ಯಾಟ್ ಬೀಸಿದ ಈ ಜೋಡಿ 20 ಓವರ್ಗಳಲ್ಲಿ 210ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡದ ಮುಂದೆ ಬೃಹತ್ ಟಾರ್ಗೆಟ್ ನೀಡಿತು.
ವಿಕೆಟ್ ಕೀಪರ್ ಬ್ಯಾಟರ್ ಡಿಕಾಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ, ಐಪಿಎಲ್ನಲ್ಲಿ ಎರಡನೇ ಶತಕ( ಅಜೇಯ140) ಸಿಡಿಸಿ ಮಿಂಚಿದ್ರೆ, ಕ್ಯಾಪ್ಟನ್ ರಾಹುಲ್ 68 ರನ್ಗಳಿಸಿದರು. ಡಿಕಾಕ್ ತಾವು ಎದುರಿಸಿದ 70 ಎಸೆತಗಳಲ್ಲಿ 10 ಸಿಕ್ಸರ್, 10 ಬೌಂಡರಿ ಸೇರಿ ಅಜೇಯ 140 ರನ್ಗಳಿಕೆ ಮಾಡಿದರು. ಕೋಲ್ಕತ್ತಾ ತಂಡದ ಯಾವೊಬ್ಬ ಪ್ಲೇಯರ್ ಕೂಡ ಒಂದೇ ಒಂದು ವಿಕೆಟ್ ಸಹ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಟಿಮ್ ಸೌಥಿ ತಾವು ಎಸೆದ 4 ಓವರ್ಗಳಲ್ಲಿ 57ರನ್ ನೀಡಿ, ದುಬಾರಿಯಾದರು.
211ರನ್ಗಳ ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್, ಆರಂಭಿಕ ಆಘಾತದ ಹೊರತಾಗಿ ನಾಯಕ ಶ್ರೇಯಸ್ ಅಯ್ಯರ್(50), ರಿಂಕು ಸಿಂಗ್ ಸ್ಫೋಟಕ(40) ಹಾಗೂ ನರೈನ್ ಅಜೇಯ(21) ಸಹಾಯದಿಂದ ನಿಗದಿತ 20 ಓವರ್ಗಳಲ್ಲಿ 8ವಿಕೆಟ್ನಷ್ಟಕ್ಕೆ 208ರನ್ಗಳಿಕೆ ಮಾಡಿ, 2ರನ್ಗಳ ರೋಚಕ ಸೋಲು ಕಂಡಿತು.