ಮುಂಬೈ:ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 52ರನ್ಗಳ ಅಂತರದ ಗೆಲುವು ದಾಖಲು ಮಾಡುವ ಮೂಲಕ ಪ್ಲೇ-ಆಫ್ ರೇಸ್ನಲ್ಲಿ ಜೀವಂತವಾಗಿ ಉಳಿದುಕೊಂಡಿದೆ. ಇಂದಿನ ಪಂದ್ಯದಲ್ಲಿ ರೋಹಿತ್ ಬಳಗ ಮತ್ತೊಂದು ಸೋಲಿನ ರುಚಿ ಕಂಡಿದೆ.
ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ವೆಂಕಟೇಶ್ ಅಯ್ಯರ್ 43ರನ್, ನಿತೀಶ್ ರಾಣಾ 43ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 165ರನ್ಗಳಿಕೆ ಮಾಡಿ, ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಮುಂಬೈ ಪರ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ 4 ಓವರ್ಗಳಲ್ಲಿ ಕೇವಲ 10ರನ್ ನೀಡಿ, ಐದು ವಿಕೆಟ್ ಪಡೆದು ಮಿಂಚಿದರು.
ಐದು ವಿಕೆಟ್ ಪಡೆದು ಮಿಂಚಿದ ಜಸ್ಪ್ರೀತ್ ಬುಮ್ರಾ 166ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತಕ್ಕೊಳಗಾಯಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಲು ಕಣಕ್ಕಿಳಿದ ರೋಹಿತ್ ಶರ್ಮಾ(2ರನ್) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಬಂದ ತಿಲಕ್ ವರ್ಮಾ ಕೂಡ ಕೇವಲ 6ರನ್ಗಳಿಸಿ ಔಟಾದರು. ಕೊನೆಯದಾಗಿ ತಂಡ 17.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 113ರನ್ಗಳಿಕೆ ಮಾಡಲು ಮಾತ್ರ ಶಕ್ತವಾಯಿತು.
ತಂಡದ ಪರ ಇಶಾನ್ ಕಿಶನ್ 51ರನ್ಗಳಿಕೆ ಮಾಡಿ, ಉತ್ತಮವಾಗಿ ಆಡ್ತಿದ್ದ ವೇಳೆ ಕಮ್ಮಿನ್ಸ್ ಓವರ್ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ರಮಣದೀಪ್ ಸಿಂಗ್ 12ರನ್, ಟಿಮ್ ಡೇವಿಡ್ 13ರನ್, ಸ್ಯಾಮ್ಸ್ 1ರನ್ಗಳಿಕೆ ಮಾಡಿ ಔಟಾದರು. ಗೆಲುವಿನ ಭರವಸೆ ಮೂಡಿಸಿದ್ದ ಪೋಲಾರ್ಡ್ ಕೂಡ 14ರನ್ಗಳಿಕೆ ಮಾಡಿ ಔಟಾದರು.
ಕೋಲ್ಕತ್ತಾ ಪರ ಕಮ್ಮಿನ್ಸ್ 3 ವಿಕೆಟ್, ರಸೆಲ್ 2 ವಿಕೆಟ್ ಪಡೆದರೆ, ಸೌಥಿ, ಜಾಕ್ಸನ್, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.