ಮುಂಬೈ:ಇಲ್ಲಿನ ಬ್ರೆಬೊರ್ನ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಆರಂಭಿಕ ಆಘಾತದ ನಡುವೆ ಕೂಡ ಬೃಹತ್ ರನ್ಗಳಿಕೆ ಮಾಡಿತ್ತು. ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಲಿವಿಂಗ್‌ಸ್ಟೋನ್ ಅಬ್ಬರದ ಅರ್ಧಶತಕದ ನೆರವಿನಿಂದ ಗುಜರಾತ್ ಗೆಲುವಿಗೆ 190 ರನ್ ಬೃಹತ್ ಟಾರ್ಗೆಟ್ ನೀಡಿತ್ತು. ಆದ್ರೆ ಆರಂಭಿಕ ಆಟಗಾರ ಗಿಲ್ನ ಜವಾಬ್ದಾರಿಯುತ ಆಟ ಮತ್ತು ರಾಹುಲ್ ತೆವಾಟಿಯಾ ಭರ್ಜರಿ ಆಟದ ನೆರವಿನಿಂದ ಗುಜರಾತ್ ತಂಡ ರೋಚಕ ಜಯ ಸಾಧಿಸಿತು.
ಪಂಜಾಬ್ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಪಂಜಾಬ್ ತಂಡಕ್ಕೆ ಎರಡನೇ ಓವರ್ನಲ್ಲೇ ಹಾರ್ದಿಕ್ ಪಾಂಡ್ಯಾ ಶಾಕ್ ನೀಡಿದರು. ಕೇವಲ 5 ರನ್ಗಳಿಕೆ ಮಾಡಿದ್ದ ಮಯಾಂಕ್ ಅಗರವಾಲ್ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಬಂದ ಬೈರ್ಸ್ಟೋ (8 ರನ್) ಕೂಡ ಫರ್ಗ್ಯೂಸನ್ ಓವರ್ನಲ್ಲಿ ಔಟಾದರು.
ಧವನ್-ಲಿವಿಂಗ್ ಸ್ಟೋನ್ ಜೊತೆಯಾಟ: ಆರಂಭಿಕ ಆಟಗಾರ ಶಿಖರ್ ಧವನ್ ಜೊತೆ ಸೇರಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಲಿವಿಂಗ್‌ಸ್ಟೋನ್ ಎದುರಾಳಿ ಬೌಲರ್ಗಳನ್ನು ಸುಲಭವಾಗಿ ದಂಡಿಸಿದರು. ಜೊತೆಗೆ ತಂಡದ ರನ್ಗತಿ ಹೆಚ್ಚಿಸಿದರು. ಶಿಖರ್ ಧವನ್ ತಾವು ಎದುರಿಸಿದ 30 ಎಸೆತಗಳಲ್ಲಿ 35ರನ್ಗಳಿಕೆ ಮಾಡಿದ್ರೆ, ಲಿವಿಂಗ್‌ಸ್ಟೋನ್ ಕೇವಲ 27 ಎಸೆತಗಳಲ್ಲಿ 4 ಸಿಕ್ಸರ್ ಸೇರಿ 64 ರನ್ಗಳಿಸಿದರು. ಧವನ್ ವಿಕೆಟ್ ಉರುಳುತ್ತಿದ್ದಂತೆ ಮೈದಾನಕ್ಕೆ ಬಂದ ಜಿತೇಶ್ ಶರ್ಮಾ ಕೂಡ ತಾವು ಎದುರಿಸಿದ 11 ಎಸೆತಗಳಲ್ಲಿ ಸ್ಫೋಟಕ ಆಟವಾಡಿ 23 ರನ್ಗಳಿಕೆ ಮಾಡಿ ತಂಡಕ್ಕೆ ನೆರವಾದರು.
ಓದಿ:ಟಿ20ಯಲ್ಲಿ 1,000 ಬೌಂಡರಿ ಬಾರಿಸಿದ 'ಗಬ್ಬರ್ ಸಿಂಗ್'! ಈ ಸಾಧನೆಗೈದ ಮೊದಲ ಭಾರತೀಯ
ದೊಡ್ಡ ಹೊಡೆತಕ್ಕೆ ಮುಂದಾದ ಒಡಿಯಾನ್ ಸ್ಮಿತ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ನಾಲ್ಕಂಡೆಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಶಾರೂಖ್ ಖಾನ್ 8 ಎಸೆತಗಳಲ್ಲಿ 15ರನ್ಗಳಿಕೆ ಮಾಡಿದರು. ಪಂಜಾಬ್ ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡರೂ ಕೂಡ ರನ್ಗತಿಯಲ್ಲಿ ಯಾವುದೇ ಇಳಿಕೆ ಕಂಡು ಬರಲಿಲ್ಲ. ಪಂದ್ಯದ ಕೊನೆಯಲ್ಲಿ ಮೈದಾನಕ್ಕಿಳಿದ ರಾಹುಲ್ ಚಹರ್ ತಾವು ಎದುರಿಸಿದ 14 ಎಸೆತಗಳಲ್ಲಿ 22ರನ್ಗಳಿಕೆ ಮಾಡಿ ತಂಡದ ಮೊತ್ತ ಮತ್ತಷ್ಟು ಏರಿಕೆ ಮಾಡಿದರು.
ಕೊನೆಯದಾಗಿ ತಂಡ 20 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 189ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ 190ರನ್ಗಳ ಗುರಿ ನೀಡಿತ್ತು. ಗುಜರಾತ್ ತಂಡದ ಪರ ರಶೀದ್ ಖಾನ್ ಮೂರು ವಿಕೆಟ್, ದರ್ಶನ್ ನಾಲ್ಕಂಡೆ 2 ವಿಕೆಟ್ ಪಡೆದುಕೊಂಡರೆ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯಾ ಹಾಗೂ ಫರ್ಗ್ಯೂಸನ್ ತಲಾ 1 ವಿಕೆಟ್ ಕಿತ್ತರು.
ಗುಜರಾತ್ ಇನ್ನಿಂಗ್ಸ್: ಪಂಜಾಬ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಹಾರ್ದಿಕ್ ಪಾಂಡ್ಯಾ ಬಳಗ ಆರಂಭದಲ್ಲಿ ಕೊಂಚ ಎಡವಿತು. ರಬಾಡ ಎಸೆತದಲ್ಲಿ 6 ರನ್ ಗಳಿಸಿದ್ದ ಮ್ಯಾಥ್ಯೂ ವೇಡ್ ಔಟಾಗಿ ಪೆವಿಲಿಯನ್ ಸೇರಿದರು. ಬಳಿಕ ಶುಬ್ಮನ್ ಗಿಲ್ ಜೊತೆ ಸಾಯಿ ಸುದರ್ಶನ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.
ಶತಕದ ಜೊತೆಯಾಟ: ವೇಡ್ ವಿಕೆಟ್ ಬಳಿಕ ಸಾಯಿ ಸುದರ್ಶನ್ ಕಣಕ್ಕಿಳಿದರು. ಶುಬ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಪಂಜಾಬ್ ಬೌಲರ್ಗಳ ಬೆವರಿಳಿಸಿದರು. ಈ ಇಬ್ಬರು ಆಟಗಾರರು ಪಂಜಾಬ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ಶತಕದ ಜೊತೆಯಾಟವಾಡಿದರು. ಬಳಿಕ ಸಾಯಿ ಸುದರ್ಶನ್ 35 ರನ್ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.
ಸಾಯಿ ಸುದರ್ಶನ್ ಔಟಾದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯಾ ಕಣಕ್ಕಿಳಿದರು. ಶುಬ್ಮನ್ ಗಿಲ್ಗೆ ಹಾರ್ದಿಕ್ ಪಾಂಡ್ಯಾ ಸಾಥ್ ನೀಡಿದರು. ಆದ್ರೆ ಪಂದ್ಯದ ಗೆಲುವಿನ ದಡದಲ್ಲಿ ಶುಬ್ಮನ್ ಗಿಲ್ 96 ರನ್ ಗಳಿಸಿ ಔಟಾದರು. ಈ ಮೂಲಕ ಅವರು ಶತಕ ವಂಚಿತರಾದರು.
ಕೊನೆ ಎಸೆತದಲ್ಲಿ ಜಯ: ಕೊನೆ ಓವರ್ನಲ್ಲಿ ಗುಜರಾತ್ ತಂಡ ಗೆಲ್ಲಲು 19 ರನ್ಗಳು ಬೆಕಾಗಿದ್ದವು. ಶುಬ್ಮನ್ ಗಿಲ್ ಔಟಾದ ಬಳಿಕ ಡೇವಿಡ್ ಮಿಲ್ಲರ್ ಕಣಕ್ಕಿಳಿದಿದ್ದರು. ಪಂಜಾಬ್ ತಂಡ ಕೊನೆ ಓವರ್ನ್ನು ಆಲ್ರೌಂಡರ್ ಆಟಗಾರ ಒಡಿಯಾನ್ ಸ್ಮಿತ್ಗೆ ನೀಡಿತ್ತು. ಸ್ಮಿತ್ ಹಾಕಿದ್ದ ಮೊದಲನೇ ಎಸೆತ ವೈಡ್ ಆಗಿತ್ತು. ಬಳಿಕ ಗುಜರಾತ್ ತಂಡಕ್ಕೆ 6 ಎಸೆತಕ್ಕೆ 18 ರನ್ಗಳು ಬೇಕಾಗಿದ್ದವು. ಒಡಿಯಾನ್ ಸ್ಮಿತ್ ವೈಡ್ ಬಳಿಕ ಎಸೆದ ಬಾಲ್ಗೆ ರನ್ ಕದೆಯುವ ಭರದಲ್ಲಿ 27 ರನ್ ಗಳಿಸಿ ಅಬ್ಬರಿಸುತ್ತಿದ್ದ ನಾಯಕ ಹಾರ್ದಿಕ್ ಪಾಂಡ್ಯಾ ರನೌಟ್ ಆದರು.
ರಾಹುಲ್ ತೆವಾಟಿಯಾ ಭರ್ಜರಿ ಆಟ: ಹಾರ್ದಿಕ್ ಪಾಂಡ್ಯಾ ಔಟಾದ ಬಳಿಕ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಗೆಲುವಿನ ಆಸೆ ಕಂಡಿದ್ದ ಗುಜರಾತ್ ಫ್ಯಾನ್ಸ್ಗೆ ಶಾಕ್ ಆಗಿತ್ತು. ಬಳಿಕ ಬಂದ ತೆವಾಟಿಯಾ ಡೆವಿಡ್ ಮಿಲ್ಲರ್ ಜೊತೆಗೂಡಿ ಉತ್ತಮ ಪ್ರದರ್ಶನ ತೋರಿದರು.
ಓದಿ:'ಕುಂಬ್ಳೆ ಜೊತೆ ಕೊಹ್ಲಿ ಭಿನ್ನಮತದ ಬಗ್ಗೆ ನನ್ನ ಪುಸ್ತಕದಲ್ಲಿ ಉಲ್ಲೇಖಿಸಿಲ್ಲ'
ಒಡಿಯಾನ್ನ ಎರಡನೇ ಎಸೆತ ಎದುರಿಸಿದ ತೆವಾಟಿಯಾ ಒಂದು ರನ್ ತೆಗೆದು ಮಿಲ್ಲರ್ಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಮೂರನೇ ಎಸೆತದಲ್ಲಿ ಮಿಲ್ಲರ್ ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ಏರಿಸಿದರು. ಬಳಿಕ ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಒಂದು ರನ್ ಗಳಿಸಿ ತೆವಾಟಿಯಾಗೆ ಬ್ಯಾಟಿಂಗ್ ನೀಡಿದರು.
ಗುಜರಾತ್ ತಂಡ ಗೆಲ್ಲಲು ಕೊನೆ ಎರಡು ಎಸೆತಕ್ಕೆ 12 ರನ್ ಗಳಿಸುವ ಒತ್ತಡಕ್ಕೆ ಸಿಲುಕಿತ್ತು. ಕ್ರೀಸ್ನಲ್ಲಿ ತೆವಾಟಿಯಾ ಬ್ಯಾಟಿಂಗ್ ಮಾಡುತ್ತಿದ್ದರು. ಒಡಿಯಾನ್ನ ಐದನೇ ಎಸೆತದಲ್ಲಿ ತೆವಾಟಿಯಾ ಸಿಕ್ಸ್ ಬಾರಿಸಿದರು. ಇದರಿಂದ ತಂಡದ ಗೆಲುವಿನ ಕನಸು ಚಿಗುರಿತು. ಕೊನೆಯ ಎಸೆತದಲ್ಲಿ ತೆವಾಟಿಯಾ ಮತ್ತೊಂದು ಸಿಕ್ಸ್ ಬಾರಿಸುವ ಮೂಲಕ ಪಂಜಾಬ್ ವಿರುದ್ಧ ಗುಜರಾತ್ ತಂಡ ರೋಚಕ ಜಯ ಸಾಧಿಸಿತು. ತೆವಾಟಿಯಾ ಆಡಿದ ಮೂರ ಎಸೆತದಲ್ಲಿ 13 ರನ್ಗಳನ್ನು ಕಲೆ ಹಾಕಿದರು. ಒಟ್ಟಿನಲ್ಲಿ ಪಂಜಾಬ್ ನೀಡಿದ ಗುರಿಯನ್ನು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳನ್ನು ಕಳೆದು ಕೊಂಡು 190 ರನ್ಗಳನ್ನು ಕಲೆ ಹಾಕುವ ಮೂಲಕ ಗುಜರಾತ್ ತಂಡ ಗೆಲುವಿನ ಹಾದಿ ತಲುಪಿತು.
ಇಂದು ಮಧ್ಯಾಹ್ನ 3.30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮೊದಲನೇ ಗೆಲುವಿಗಾಗಿ ಹೋರಾಟ ನಡೆಸಲಿದ್ದು, ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ಸೆಣಸಾಟ ನಡೆಯಲಿದೆ.