ಕೋಲ್ಕತ್ತಾ(ಪಶ್ಚಿಮ ಬಂಗಾಳ): ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಆರಂಭಿಕ ಆಟಗಾರ ಜೋಸ್ ಬಟ್ಲರ್(89) ಸ್ಫೋಟಕ ಆಟದ ನೆರವಿನಿಂದ ಗುಜರಾತ್ ತಂಡಕ್ಕೆ 189ರನ್ಗಳ ಬೃಹತ್ ಗುರಿ ನೀಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಆರಂಭದಲ್ಲೇ ಜೈಸ್ವಾಲ್(3) ವಿಕೆಟ್ ಕಳೆದುಕೊಂಡಿತು. ಈ ವೇಳೆ ಒಂದಾದ ಕ್ಯಾಪ್ಟನ್ ಸ್ಯಾಮ್ಸನ್ ಹಾಗೂ ಬಟ್ಲರ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟ ನೀಡಿತು.
ಅಬ್ಬರಿಸಿದ ಸ್ಯಾಮ್ಸನ್ ತಾವು ಎದುರಿಸಿದ 26 ಎಸೆತಗಳಲ್ಲಿ 47ರನ್ಗಳಿಕೆ ಮಾಡಿದರು. ಇದಾದ ಬಳಿಕ ಕಣಕ್ಕಿಳಿದ ಪಡಿಕ್ಕಲ್ 28ರನ್ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಹೆಟ್ಮಾಯರ್ (4), ಪರಾಗ್(4) ನಿರಾಸೆ ಮೂಡಿಸಿದರು. ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಬಟ್ಲರ್ ಕೊನೆಯಲ್ಲಿ ಅಬ್ಬರಿಸಿದರು. ತಾವು ಎದುರಿಸಿದ 56 ಎಸೆತಗಳಲ್ಲಿ 2 ಸಿಕ್ಸರ್, 12 ಬೌಂಡರಿ ಸಮೇತ 89ರನ್ಗಳಿಕೆ ರನೌಟ್ ಆದರು. ತಂಡ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 188ರನ್ಗಳಿಸಿದ್ದು, ಎದುರಾಳಿ ತಂಡಕ್ಕೆ ಬೃಹತ್ ಟಾರ್ಗೆಟ್ ನೀಡಿದೆ.
ಗುಜರಾತ್ ತಂಡದ ಪರ ಶಮಿ, ದಯಾಲ್, ಸಾಯಿ ಕಿಶೋರ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದುಕೊಂಡರು.
15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದಿನಿಂದ ಪ್ಲೇ - ಆಫ್ ಪಂದ್ಯಗಳು ಶುರುವಾಗಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಸೆಣಸಾಟ ನಡೆಸಲು ಸಜ್ಜಾಗಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ತಂಡ ಬೌಲಿಂಗ್ ಆಯ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ ನೇರವಾಗಿ ಫೈನಲ್ಗೆ ಲಗ್ಗೆ ಹಾಕಲಿರುವ ಕಾರಣ, ಎರಡು ತಂಡಗಳಿಂದ ಭರ್ಜರಿ ಪೈಪೋಟಿ ಕಂಡು ಬರಲಿದೆ.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ವಿ.ಕೀ, ಕ್ಯಾಪ್ಟನ್), ದೇವದತ್ ಪಡಿಕ್ಕಲ್, ಆರ್.ಅಶ್ವಿನ್, ಶಿಮ್ರಾನ್ ಹೆಟ್ಮಾಯರ್, ರಿಯಾಗ್ ಪರಾಗ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಲ್, ಒಬ್ಡೆ ಮ್ಯಾಕೆ
ಗುಜರಾತ್ ಟೈಟನ್ಸ್:ವೃದ್ಧಿಮಾನ್ ಸಾಹ(ವಿ.ಕೀ), ಶುಬ್ಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ಕ್ಯಾಪ್ಟನ್), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ಯಶ್ ದಯಾಲ್, ಅಲ್ಜರಿ ಜೋಸೆಫ್, ಮೊಹಮ್ಮದ್ ಶಮಿ
ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಆದರೆ, ಗುಜರಾತ್ ಟೈಟನ್ಸ್ ಮಾತ್ರ ಆಡುವ 11ರ ಬಳಗದಲ್ಲಿ ಕೇವಲ 1 ಬದಲಾವಣೆ ಮಾಡಿದ್ದು, ಲಕಿ ಫರ್ಗ್ಯುಸನ್ ಸ್ಥಾನಕ್ಕೆ ಅಲ್ಜರಿ ಜೋಸೆಫ್ಗೆ ಮಣೆ ಹಾಕಿದೆ. ವಿಶೇಷವೆಂದರೆ 15ನೇ ಆವೃತ್ತಿ ಐಪಿಎಲ್ನಲ್ಲಿ ಸಂಜು ಸ್ಯಾಮ್ಸನ್ ಬರೋಬ್ಬರಿ 12 ಸಲ ಟಾಸ್ ಸೋತಿದ್ದು, ಇಂದಿನ ಮಹತ್ವದ ಪಂದ್ಯದಲ್ಲೂ ಟಾಸ್ ಸೋತಿದ್ದಾರೆ.