ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ದಾಖಲೆಯ 62ರನ್ಗಳ ಅಂತರದ ಗೆಲುವು ದಾಖಲು ಮಾಡುವ ಮೂಲಕ ಗುಜರಾತ್ ಟೈಟನ್ಸ್ ಮೊದಲ ತಂಡವಾಗಿ ಅಧಿಕೃತವಾಗಿ ಪ್ಲೇ-ಆಫ್ಗೆ ಲಗ್ಗೆ ಹಾಕಿದೆ. ಮಹತ್ವದ ಪಂದ್ಯದಲ್ಲಿ ಸೋಲು ಕಂಡ ರಾಹುಲ್ ಬಳಗ ನಿರಾಸೆ ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯದ ನಡುವೆ ಕೂಡ ಗಿಲ್ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 144 ರನ್ಗಳಿಕೆ ಮಾಡಿತು. ಇದರ ಬೆನ್ನತ್ತಿದ ಲಖನೌ ತಂಡ 13.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡ ಕೇವಲ 82ರನ್ಗಳಿಕೆ ಮಾಡಿತು. ಈ ಮೂಲಕ 62ರನ್ಗಳ ಸೋಲು ಕಂಡಿದೆ.
ಗುಜರಾತ್ ಪರ ಮಿಂಚಿದ ರಾಶೀದ್ ಖಾನ್ 4 ವಿಕೆಟ್ ಪಡೆದರೆ, ಯಶ್ ದಯಾಲ್ ಹಾಗೂ ಕಿಶೋರ್ ತಲಾ 2 ವಿಕೆಟ್ ಹಾಗೂ ಶಮಿ 1 ವಿಕೆಟ್ ಕಿತ್ತರು.
ಉತ್ತಮ ಜೊತೆಯಾಟವಾಡಿದ ಗಿಲ್- ಮಿಲ್ಲರ್ ಜೋಡಿ: ಎದುರಾಳಿ ತಂಡದ ಬೌಲರ್ಗಳ ಅತ್ಯುತ್ತಮ ಬೌಲಿಂಗ್ ದಾಳಿ ಹೊರತಾಗಿ ಕೂಡ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹಾಗೂ ಮಿಲ್ಲರ್ ಉತ್ತಮ ಜೊತೆಯಾಟವಾಡಿದರು. ಮಿಲ್ಲರ್ 26ರನ್ಗಳಿಕೆ ಮಾಡಿದ್ರೆ, ಗಿಲ್ ಅಜೇಯ 63ರನ್ಗಳಿಸಿದರು. ಕೊನೆಯದಾಗಿ ಅಬ್ಬರಿಸಿದ ರಾಹುಲ್ ತೆವಾಟಿಯಾ ಕೇವಲ 16 ಎಸೆತಗಳಲ್ಲಿ ಅಜೇಯ 22ರನ್ಗಳಿಕೆ ಮಾಡಿ, ತಂಡದ ರನ್ ಹೆಚ್ಚಿಸುವಲ್ಲಿ ಯಶಸ್ವಿಯಾದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 144ರನ್ಗಳಿಕೆ ಮಾಡಿತು.
ಲಖನೌ ತಂಡದ ಪರ ಆವೇಶ್ ಖಾನ್ 2 ವಿಕೆಟ್ ಪಡೆದರೆ, ಮೋಸಿನ್ ಖಾನ್ ಹಾಗೂ ಹೋಲ್ಡರ್ ತಲಾ 1 ವಿಕೆಟ್ ಪಡೆದರು.
145ರನ್ಗಳ ಗುರಿ ಬೆನ್ನತ್ತಿದ ಲಖನೌ ತಂಡ ಆರಂಭದಿಂದಲೂ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ಬ್ಯಾಟರ್ ರಾಹುಲ್ ಕೇವಲ 8ರನ್ಗಳಿಕೆ ಮಾಡಿದ್ರೆ, ಡಿಕಾಕ್ 11ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೆ ಬಂದ ದೀಪಕ್ ಹೂಡಾ ಮಾತ್ರ 27ರನ್ಗಳಿಕೆ ಮಾಡಿ ತಂಡದ ಪರ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದರು. ಉಳಿದಂತೆ ಕರಣ್ ಶರ್ಮಾ 4ರನ್, ಕೃನಾಲ್ ಪಾಂಡ್ಯ 5ರನ್, ಬದೌನಿ 8ರನ್, ಸ್ಟೋಯ್ನಿಸ್ 2ರನ್, ಹೊಲ್ಡರ್ 1, ಮೊಸಿನ್ ಖಾನ್ 1ರನ್ಗಳಿಸಿ ಔಟಾದರು.
ಗುಜರಾತ್ ಪರ ಮಿಂಚಿದ ರಾಶೀದ್ ಖಾನ್:ಗುಜರಾತ್ ತಂಡದ ಪರ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ ರಾಶೀದ್ ಖಾನ್ 3.5 ಓವರ್ಗಳಲ್ಲಿ ಪ್ರಮುಖ 4 ವಿಕೆಟ್ ಪಡೆದರು. ಇವರಿಗೆ ಉತ್ತಮ ಸಾಥ್ ನೀಡಿದ ದಯಾಳ್, ಕಿಶೋರ್ ತಲಾ 2 ವಿಕೆಟ್ ಪಡೆದರು.