ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ 50ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಜಯದ ಲಯಕ್ಕೆ ಮರಳಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ಹೈದರಾಬಾದ್ ಸತತ 3ನೇ ಸೋಲಿಗೆ ಶರಣಾಯಿತು.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಲು ಎರಡು ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಡಿ ಆಗಿತ್ತು. ಪಂದ್ಯದಲ್ಲಿ 21ರನ್ಗಳ ಅಂತರದ ಗೆಲುವು ದಾಖಲು ಮಾಡಿರುವ ರಿಷಭ್ ಪಂತ್ ಪಡೆ, ಪಾಯಿಂಟ್ ಪಟ್ಟಿಯಲ್ಲಿ ಇದೀಗ 5ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಆಘಾತದ ನಡುವೆ ಕೂಡ ಡೇವಿಡ್ ವಾರ್ನರ್(92*), ರೋವ್ಮ್ಯಾನ್ ಪೊವೆಲ್(67*) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 207ರನ್ಗಳಿಕೆ ಮಾಡಿತು. ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ಅಬ್ಬೊಟ್ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದುಕೊಂಡರು.
ವಾರ್ನರ್, ಪೊವೆಲ್ ಭರ್ಜರಿ ಬ್ಯಾಟಿಂಗ್
ಇದನ್ನೂ ಓದಿ:IPLನಲ್ಲಿ ತಮ್ಮದೇ ದಾಖಲೆ ಬ್ರೇಕ್ ಮಾಡಿದ ಉಮ್ರಾನ್ ಮಲಿಕ್.. 157ಕಿ.ಮೀ ವೇಗದಲ್ಲಿ ‘ಜಮ್ಮು ಎಕ್ಸ್ಪ್ರೆಸ್’ ಬೌಲಿಂಗ್!
208 ರನ್ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸೋಲು ಒಪ್ಪಿಕೊಳ್ಳಬೇಕಾಯಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ(7), ಕೇನ್ ವಿಲಿಯಮ್ಸನ್(4) ನಿರಾಸೆ ಮೂಡಿಸಿದರು. ರಾಹುಲ್ ತ್ರಿಪಾಠಿ(22) ಉತ್ತಮ ಆರಂಭ ಪಡೆದುಕೊಂಡರೂ, ಮೈದಾನದಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮರ್ಕರಮ್(42), ನಿಕೋಲಸ್ ಪೂರನ್(62)ರನ್ಗಳನ್ನು ಸಿಡಿಸಿ, ಗೆಲುವಿನ ಭರವಸೆ ಮೂಡಿಸಿದ್ರೂ ಸಾಧ್ಯವಾಗಲಿಲ್ಲ. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 186ರನ್ಗಳಿಕೆ ಮಾಡಿ ಸೋಲೊಪ್ಪಿಕೊಂಡಿತು.
ಡೆಲ್ಲಿ ತಂಡದ ಪರ ಖಲೀಲ್ ಅಹ್ಮದ್ 3 ವಿಕೆಟ್, ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರೆ, ಮಾರ್ಷ್, ಕುಲ್ದೀಪ್ ಯಾದವ್ ಹಾಗೂ ನಾರ್ಟ್ಜೆ ತಲಾ 1 ವಿಕೆಟ್ ಕಿತ್ತರು. ಈ ಗೆಲುವಿನೊಂದಿಗೆ ಡೆಲ್ಲಿ ಆಡಿರುವ 10 ಪಂದ್ಯಗಳ ಪೈಕಿ 5ರಲ್ಲಿ ಗೆಲುವು, 5ರಲ್ಲಿ ಸೋತು ಐದನೇ ಸ್ಥಾನಕ್ಕೆ ಲಗ್ಗೆಹಾಕಿದ್ದು, ಇಷ್ಟೇ ಪಂದ್ಯಗಳಲ್ಲಿ ಗೆದ್ದು ಹೈದರಾಬಾದ್ 10 ಅಂಕಗಳಿಕೆ ಮಾಡಿ, ರನ್ರೇಟ್ ಲೆಕ್ಕಾಚಾರದಲ್ಲಿ 6ನೇ ಸ್ಥಾನದಲ್ಲಿದೆ.