ಮುಂಬೈ:15ನೇ ಆವೃತ್ತಿ ಐಪಿಎಲ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಪ್ರದರ್ಶನ ನೀಡಿದ ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಂಡವನ್ನ ಗೆಲುವಿನ ಗುರಿ ಮುಟ್ಟಿಸಿದರು. ಈ ಮೂಲಕ ಟೂರ್ನಿಯಲ್ಲಿ ಸಿಎಸ್ಕೆ ಎರಡನೇ ಗೆಲುವು ದಾಖಲು ಮಾಡಿದ್ರೆ, ಮುಂಬೈ ಇಂಡಿಯನ್ಸ್ ಸತತ 7ನೇ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದೆ.
ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ, ಬ್ಯಾಟಿಂಗ್ ವೈಫಲ್ಯದ ಹೊರತಾಗಿ ಕೂಡ ಯುವ ಬ್ಯಾಟರ್ ತಿಲಕ್ ವರ್ಮಾ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ಗಳಿಸಿತು.ಪವರ್ ಪ್ಲೇ ನಲ್ಲೇ ಮುಖೇಶ್ ಚೌಧರಿ ದಾಳಿಗೆ ಸಿಲುಕಿ 3 ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ(0), ಇಶಾನ್ ಕಿಶನ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದರೆ, ಡೆವಾಲ್ಡ್ ಬ್ರೇವಿಸ್ 4 ರನ್ಗಳಿಸಿ ಔಟಾದರು. ಇನ್ನಿಂಗ್ಸ್ 8ನೇ ಓವರ್ನಲ್ಲಿ 21 ಎಸೆತಗಳಲ್ಲಿ 32 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಚೌಧರಿಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ಸೇರಿಕೊಂಡರು.
5ನೇ ಓವರ್ನಲ್ಲಿ ಸಿಕ್ಕ ಜೀವದಾನವನ್ನು ಸದುಪಯೋಗಿಸಿಕೊಂಡ 19 ವರ್ಷದ ತಿಲಕ್ ವರ್ಮಾ ಅಜೇಯ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಈ ವೇಳೆ ಅವರು ಇಂದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಹೃತಿಕ್ ಶೊಕೀನ್(25) ಜೊತೆಗೂಡಿ 5ನೇ ವಿಕೆಟ್ಗೆ 38 ರನ್ ಸೇರಿಸಿದರು.
ನಂತರ ಬಂದ ಕೀರನ್ ಪೋಲಾರ್ಡ್(14) ಮತ್ತು ಡೇನಿಯಲ್ ಸ್ಯಾಮ್ಸ್(5) ಮತ್ತೊಮ್ಮೆ ವಿಫಲರಾದರು. ಆದರೆ 8ನೇ ವಿಕೆಟ್ ಜೊತೆಯಾಟದಲ್ಲಿ ತಿಲಕ್ ಮತ್ತು ಜಯದೇವ್ ಉನಾದ್ಕತ್ 35 ರನ್ ಸೇರಿಸುವ ಮೂಲಕ 156 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು. 43 ಎಸೆತಗಳನ್ನು ಎದುರಿಸಿದ ತಿಲಕ್ 3 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 51 ಮತ್ತು ಉನಾದ್ಕತ್ 9 ಎಸೆತಗಳಲ್ಲಿ 19 ರನ್ಗಳಿಸಿದರು. ಸಿಎಸ್ಕೆ ಪರ ಮುಖೇಶ್ ಚೌಧರಿ 19ಕ್ಕೆ 3, ಡ್ವೇನ್ ಬ್ರಾವೋ 36ಕ್ಕೆ 2, ಸ್ಯಾಂಟ್ನರ್ ಮತ್ತು ತೀಕ್ಷಣ ತಲಾ ಒಂದು ವಿಕೆಟ್ ಪಡೆದರು.