ಮುಂಬೈ:ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಲು ಮಾಡು ಇಲ್ಲವೆ ಮಡಿಯಾಗಿದ್ದ ಇಂದಿನ ಪಂದ್ಯದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 97 ರನ್ಗಳಿಗೆ ಆಲೌಟ್ ಆಗಿದೆ. ಸತತ ವಿಕೆಟ್ ಪತನದ ಹೊರತಾಗಿ ಕೂಡ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ(36ರನ್) ಏಕಾಂಗಿ ಹೋರಾಟ ನಡೆಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಧೋನಿ ಬಾಯ್ಸ್ ಮೊದಲ ಓವರ್ನಿಂದಲೇ ಪೆವಿಲಿಯನ್ ಪರೇಡ್ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕಾನ್ವೆ(0) ತಾವು ಎದುರಿಸಿದ ಮೊದಲ ಎಸೆತದಲ್ಲೇ ಡೆನಿಯಲ್ ಸ್ಯಾಮ್ಸ್ ಎಲ್ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಮೊಯಿನ್ ಅಲಿ(0) ಕೂಡ ಸ್ಯಾಮ್ಸ್ ಓವರ್ನಲ್ಲೇ ಔಟಾದರು.
ಇದರ ಬೆನ್ನಲ್ಲೇ ಬಂದ ರಾಬಿನ್ ಉತ್ತಪ್ಪ(1) ಕೂಡ ಬುಮ್ರಾ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಇದಾದ ಬಳಿಕ ಋತುರಾಜ್ ಕೂಡ ಕೇವಲ 7ರನ್ಗಳಿಸಿ ಸ್ಯಾಮ್ಸ್ ಬಲೆಗೆ ಬಿದ್ದರು. ಮಧ್ಯಮ ಕ್ರಮಾಂಕದಲ್ಲೂ ರಾಯುಡು 10ರನ್ಗಳಿಸಿ ಮೆರ್ಡಿತ್ ಎಸೆತದಲ್ಲಿ ಔಟಾದರು.
ಧೋನಿ ಏಕಾಂಗಿ ಹೋರಾಟ: ಸಿಎಸ್ಕೆ ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ರೂ ಏಕಾಂಗಿಯಾಗಿ ಹೋರಾಟ ನಡೆಸಿದ ಧೋನಿ ಎದುರಾಳಿ ಬೌಲರ್ಗಳನ್ನ ದಂಡಿಸಿದರು. ತಾವು ಎದುರಿಸಿದ 32 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 36ರನ್ಗಳಿಕೆ ಮಾಡಿದರು. ಇವರಿಗೆ ಶಿವಂ ದುಬೆ 10ರನ್, ಬ್ರಾವೋ 12ರನ್ ಸಾಥ್ ನೀಡಿದರು. ಕೊನೆಯದಾಗಿ ತಂಡ 15.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 97ರನ್ಗಳಿಕೆ ಮಾಡಿತು.
ಮುಂಬೈ ಪರ ಬೌಲಿಂಗ್ನಲ್ಲಿ ಅಬ್ಬರಿಸಿದ ಡ್ಯಾನಿಯಲ್ ಸ್ಯಾಮ್ಸ್ 3ವಿಕೆಟ್, ಮೆರ್ಡಿತ್, ಕಾರ್ತಿಕೇಯ 2 ವಿಕೆಟ್ ಪಡೆದ್ರೆ, ರಮಣದೀಪ್ ಸಿಂಗ್ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು.