ದುಬೈ:ಕೋವಿಡ್-19 ಕಾರಣ ಮುಂದೂಡಲ್ಪಟ್ಟು ಮತ್ತೆ ಪುನಾರಂಭಗೊಂಡಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅಬುದಾಬಿಯ ಶೇಖ್ ಜಾಯಿದ್ ಮೈದಾನದಲ್ಲಿ 31ನೇ ಪಂದ್ಯ ನಡೆಯಲಿದೆ.
ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿರುವ ಆರ್‌ಸಿಬಿ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಹಾಗೂ ಕಳಪೆ ಆಟದಿಂದ ಮೋರ್ಗನ್ ಪಡೆ 7ನೇ ಸ್ಥಾನದಲ್ಲಿದೆ. ಈ ಹಿಂದಿನ ಪಂದ್ಯದಲ್ಲಿ ಬೆಂಗಳೂರು ತಂಡವು ಪಂಜಾಬ್ ವಿರುದ್ಧ 34 ರನ್ಗಳಿಂದ ಸೋತಿತ್ತು. ಆರ್ಸಿಬಿಗೆ ಗಾಯ ಹಾಗೂ ಇತರ ಕಾರಣಗಳಿಂದ ಐವರು ಆಟಗಾರರು ಅಲಭ್ಯರಾಗಿದ್ದಾರೆ.
ಸುಂದರ್, ಡೇನಿಯಲ್ ಸ್ಯಾಮ್ಸ್, ಆಡಂ ಜಂಪಾ, ಕೇನ್ ವಿಲಿಯಮ್ಸನ್ ಹಾಗೂ ಫಿನ್ ಅಲೆನ್ ಈ ಬಾರಿ ತಂಡದಲ್ಲಿಲ್ಲ. ಇವರ ಬದಲಿಗೆ ದುಶ್ಮಂತಾ ಚಮೀರಾ, ವನಿಂದು ಹಸರಂಗಾ, ಜಾರ್ಜ್ ಗಾರ್ಟನ್ ಹಾಗೂ ಟೀಮ ಡೆವಿಡ್ ತಂಡ ಸೇರಿಕೊಂಡಿದ್ದಾರೆ.
ಈ ಎಲ್ಲ ಹೊಸ ಆಟಗಾರರೊಂದಿಗೆ ಬೆಂಗಳೂರು ಗೆಲುವು ಮುಂದುವರೆಸಿದರೆ ಪ್ಲೇ ಆಫ್ ಹಂತವು ಸುಲಲಿತವಾಗಲಿದೆ. ಇನ್ನೊಂದೆಡೆ ಟಿ-20 ವಿಶ್ವಕಪ್ ಬಳಿಕ ಟೀಂ ಇಂಟಿಯಾ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದ ವಿರಾಟ್ ಕೊಹ್ಲಿ, ಈ ಆವೃತ್ತಿಯ ಐಪಿಎಲ್ ನಂತರ ಆರ್‌ಸಿಬಿ ಸಾರಥ್ಯದಿಂದ ಕೆಳಗಿಳಿಯುವುದಾಗಿ ನಿನ್ನೆ ತಿಳಿಸಿದ್ದಾರೆ. ಹೀಗಾಗಿ ಕೊಹ್ಲಿ ನಾಯಕತ್ವದಲ್ಲಿ ಕೊನೆಯ ಬಾರಿಗೆ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದು ಎಲ್ಲ ನಿರೀಕ್ಷೆಯಾಗಿದೆ. ಈ ಬಾರಿಯಾದರೂ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಲೆಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಎಂದಿನಂತೆ ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ ಜೊತೆಗೆ ಡಿವಿಲಿಯರ್ಸ್, ಮ್ಯಾಕ್ಸ್‌ವೆಲ್, ದೇವದತ್ ಪಡಿಕ್ಕಲ್ ಬಲ ತುಂಬಲಿದ್ದಾರೆ. ಬೌಲಿಂಗ್ನಲ್ಲಿ ಆರ್ಸಿಬಿಗೆ ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಸಿರಾಜ್, ಚಹಲ್ ಇದ್ದಾರೆ. ಹೊಸಬರಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಇದನ್ನೂ ಓದಿ:ಈ ಸಾಲಿನ ಐಪಿಎಲ್ ಬಳಿಕ ಆರ್‌ಸಿಬಿ ನಾಯಕ ಸ್ಥಾನದಿಂದಲೂ ಕೆಳಗಿಳಿಯಲಿರುವ ಕೊಹ್ಲಿ
ಇನ್ನೊಂದೆಡೆ 2021ರ ಆವೃತ್ತಿಯ ಆರಂಭದಿಂದಲೂ ಕೆಕೆಆರ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ತಂಡದ ಸಮತೋಲನ ಹಾಗೂ ಬ್ಯಾಟಿಂಗ್ ಕ್ರಮಾಂಕದ ಆಯ್ಕೆ ವಿಚಾರದಲ್ಲಿ ಕೋಲ್ಕತ್ತಾ ಟೀಂ ಯೋಜನೆಗಳು ಯಶಸ್ವಿಯಾಗಿಲ್ಲ. ಈ ಹಿಂದೆ ಆಡಿದ್ದ ಪಂದ್ಯದಲ್ಲಿ ದೆಹಲಿ ವಿರುದ್ಧ 7 ವಿಕೆಟ್ಗಳಿಂದ ಸೋಲುಂಡಿತ್ತು. ಈ ಬಾರಿ ವೇಗಿ ಪ್ಯಾಟ್ ಕಮಿನ್ಸ್ ಕೂಡ ಅಲಭ್ಯರಾಗಿದ್ದು, ಟಿಮ್ ಸೌಥಿ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ.