ಚೆನ್ನೈ:ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಸನ್ರೈಸರ್ಸ್ ಹೈದರಾಬಾದ್ಗೆ ಮತ್ತೆ ನಿರಾಸೆಯಾಗಿದೆ. ಮುಂಬೈ ವಿರುದ್ಧ ಹೈದರಾಬಾದ್ ತಂಡ ಕೇವಲ 13 ರನ್ಗಳ ಸೋಲುಂಡಿದೆ.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್...
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ರೋಹಿತ್ ಶರ್ಮಾ ಮತ್ತು ಡಿಕಾಕ್ 55 ರನ್ಗಳ ಜೊತೆಯಾಟ ನೀಡಿದರು. ಸ್ಫೋಟಕ ಆಟಕ್ಕೆ ಮುಂದಾದ ರೋಹಿತ್ 25 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 32 ರನ್ಗಳಿಸಿ ವಿಜಯ್ ಶಂಕರ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಸೂರ್ಯಕುಮಾರ್ ಯಾದವ್ ಕೇವಲ 10 ರನ್ಗಳಿಸಿ ಶಂಕರ್ಗೆ 2ನೇ ಬಲಿಯಾದರು. ಡಿಕಾಕ್ ಯುವ ಆಟಗಾರ ಕಿಶನ್ ಜೊತೆಗೂಡಿ 27 ರನ್ಗಳ ಜೊತೆಯಾಟ ನೀಡಿದರು. ಅವರು 39 ಎಸೆತಗಳಲ್ಲಿ 5 ಬೌಂಡರಿ ಸಹಿತ 40 ರನ್ಗಳಿಸಿ ಮುಜೀಬ್ ಓವರ್ನಲ್ಲಿ ಔಟಾದರು. ಹೈದರಾಬಾದ್ ಬೌಲಿಂಗ್ ದಾಳಿಗೆ ನಲುಗಿದ ಇಶಾನ್ ಕಿಶನ್ 21 ಎಸೆತಗಳನ್ನೆದುರಿಸಿ ಬೌಂಡರಿ ರಹಿತ 12 ರನ್ಗಳಿಸಿ ಔಟಾದರು. ಇವರ ನಿಧಾನಗತಿ ಆಟ ತಂಡದ ದೊಡ್ಡ ಮೊತ್ತದ ಕನಸನ್ನು ಕಮರಿಸಿತು.
ಹಾರ್ದಿಕ್ ಪಾಂಡ್ಯ ಕೂಡ 7 ರನ್ಗಳಿಸಿ 19ನೇ ಓವರ್ನಲ್ಲಿ ಔಟಾದರು. ಆದರೆ ಪೊಲಾರ್ಡ್ ಕೊನೆಯ ಓವರ್ನಲ್ಲಿ 2 ಸಿಕ್ಸರ್ ಸೇರಿದಂತೆ 22 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 35 ರನ್ಗಳಿಸಿ ತಂಡದ ಮೊತ್ತವನ್ನು 150ಕ್ಕೇರಿಸಿದರು.
ಹೈದರಾಬಾದ್ ಪರ ಮುಜೀಬ್ ಮತ್ತು ವಿಜಯ್ ಶಂಕರ್ ತಲಾ 2 ವಿಕೆಟ್ ಪಡೆದರು. ಖಲೀಲ್ ಅಹ್ಮದ್ ಒಂದು ವಿಕೆಟ್ ಪಡೆದರು.
ಹೈದರಾಬಾದ್ ಸನ್ರೈಸರ್ಸ್ ಇನ್ನಿಂಗ್ಸ್...
ಮುಂಬೈ ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆತ್ತಿತ್ತು. ಜಾನಿ ಬೈರ್ಸ್ಟೋ ಮತ್ತು ನಾಯಕ ಡೇವಿಡ್ ವಾರ್ನರ್ ಜೊತೆಗೂಡಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದ್ರೆ ಇವರ ಜೋಡಿಯನ್ನು ಕುರ್ನಾಲ್ ಪಾಂಡ್ಯ ಮುರಿಯುವಲ್ಲಿ ಯಶಸ್ಸಾದರು. ಸ್ಫೋಟಕ ಬ್ಯಾಟಿಂಗ್ ಆಡಿ ಕೇವಲ 22 ಎಸೆತಗಳಲ್ಲಿ 4 ಸಿಕ್ಸ್ಗಳು ಮತ್ತು 3 ಬೌಂಡರಿಗಳ ನೆರವಿನಿಂದ 43 ರನ್ಗಳನ್ನು ಕಲೆ ಹಾಕಿದ್ದ ಜಾನಿ ಬೈರ್ಸ್ಟೋ ಕುರ್ನಾಲ್ ಪಾಂಡ್ಯಗೆ ವಿಕೆಟ್ ನೀಡಿದರು.
ಬೈರ್ಸ್ಟೋ ಬಳಿಕ ಬಂದ ಮನಿಷ್ ಪಾಂಡೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯದೇ 2 ರನ್ಗಳನ್ನು ಕಲೆ ಹಾಕಿ ರಾಹುಲ್ ಚಹಾರ್ಗೆ ವಿಕೆಟ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಬಂದ ಯುವ ಆಟಗಾರ ವಿರಾಟ್ ಸಿಂಗ್ ನಾಯಕ ವಾರ್ನರ್ ಜೊತೆಗೂಡಿದರು. 36 ರನ್ಗಳನ್ನು ಗಳಿಸಿದ್ದ ವಾರ್ನರ್ ರನ್ ಕದಿಯುವ ಬರದಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿದರು.
ವಾರ್ನರ್ ಔಟಾದ ಬಳಿಕ ಬಂದ ಆಲ್ರೌಂಡರ್ ಆಟಗಾರ ವಿಜಯ ಶಂಕರ್ ಒಂದೆಡೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದರು. ಇನ್ನೊಂದೆಡೆ ಒಬ್ಬರಂತೆ ಒಬ್ಬರು ಔಟಾಗಿ ಪೆವಿಲಿಯನ್ ಹಾದಿ ಹಿಡಿಯುತ್ತಿದ್ದರು. ಕೊನೆಯ ಘಳಿಗೆಯಲ್ಲಿ 28 ರನ್ಗಳನ್ನು ಗಳಿಸಿದ್ದ ವಿಜಯ್ ಶಂಕರ್ ಬುಮ್ರಾ ಬೌಲಿಂಗ್ನಲ್ಲಿ ಔಟಾದರು. ಹೈದರಾಬಾದ್ ತಂಡದ ಪರ, ವಿರಾಟ್ ಸಿಂಗ್ 11 ರನ್, ಅಭಿಷೇಕ್ ಶರ್ಮಾ 2 ರನ್, ಅಬ್ದುಲ್ ಸಮದ್ 7 ರನ್, ರಶಿದ್ ಖಾನ್ 0, ಭುವನೇಶ್ವರ್ ಕುಮಾರ್, ಮುಜೀಬ್ ರಹ್ಮಾನ್ ಮತ್ತು ಖಲೀಲ್ ಅಹ್ಮದ್ ತಲಾ ಒಂದೊಂದು ರನ್ಗಳನ್ನು ಕಲೆ ಹಾಕಿದರು.
ಒಟ್ನಲ್ಲಿ ಹೈದರಾಬಾದ್ ತಂಡ 19.4 ಓವರ್ಗಳಲ್ಲಿ 137 ರನ್ಗಳನ್ನು ಕಲೆಹಾಕಿ ಆಲೌಟ್ ಆಯಿತು. ಪಂದ್ಯದ ಕೊನೆ ಘಳಿಗೆಯಲ್ಲಿ ಎಡವಿದ ಹೈದರಾಬಾದ್ ತಂಡ ಮುಂಬೈ ವಿರುದ್ಧ 13 ರನ್ಗಳ ಸೋಲು ಕಂಡಿತು.
ರವಿವಾರ ಎರಡು ಪಂದ್ಯಗಳು ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಸಂಜೆ 7.30ಕ್ಕೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಹಣಾಹಣಿ ನಡೆಯಲಿದೆ.