ಶಾರ್ಜಾ:ಬೌಲರ್ಗಳ ಕರಾರುವಾಕ್ ದಾಳಿ ಹಾಗೂ ಆರಂಭಿಕ ಆಟಗಾರರ ಉತ್ತಮ ಜೊತೆಯಾಟದ ನೆರವಿನಿಂದ 14ನೇ ಆವೃತ್ತಿಯ ಐಪಿಎಲ್ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಜಯ ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ ಬಳಗ ನಿಗದಿತ 20 ಓವರ್ಗಳಲ್ಲಿ 135 ರನ್ ರನ್ಗಳಿಸಿತ್ತು. 136 ರನ್ ಗುರಿ ಬೆನ್ನಟ್ಟಿದ ಕೆಕೆಆರ್ಗೆ ಆರಂಭಿಕರಾದ ವೆಂಕಟೇಶ್ ಅಯ್ಯರ್ ಆಕರ್ಷಕ ಅರ್ಧಶತಕ ಹಾಗೂ ಶುಬ್ಮನ್ ಗಿಲ್ ಸಮಯೋಚಿತ ಬ್ಯಾಟಿಂಗ್ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಅಯ್ಯರ್ 41 ಎಸೆತಗಳಲ್ಲಿ 55 ರನ್ ಬಾರಿಸಿ ಔಟಾದರೆ, ಗಿಲ್ 46 ರನ್ ಬಾರಿಸಿ ಗೆಲುವಿಗೆ 11 ರನ್ ಬೇಕಿದ್ದಾಗ ಔಟಾದರು.
ದಿಢೀರ್ ಕುಸಿತ ಕಂಡ ಕೆಕೆಆರ್:
ವೆಂಕಟೇಶ್ ವಿಕೆಟ್ ಪತನದ ಬಳಿಕ ಬಂದ ನಿತೀಶ್ ರಾಣಾ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ. ನಂತರ ಬಂದ ದಿನೇಶ್ ಕಾರ್ತಿಕ್ (0),ನಾಯಕ ಇಯಾನ್ ಮೋರ್ಗನ್ (0) ಡಕ್ ಔಟ್ ಆಗಿ ಕೆಕೆಆರ್ ಪಾಳಯದಲ್ಲಿ ಭೀತಿಯುಟ್ಟಲು ಕಾರಣವಾದರು . ಕೊನೆಯ ಓವರ್ನಲ್ಲಿ ಕೋಲ್ಕತ್ತಾ ಗೆಲುವಿಗೆ 7 ರನ್ ಅಗತ್ಯವಿತ್ತು.
ರೋಚಕ ಕೊನೆಯ ಓವರ್:
ಕೊನೆಯ ಓವರ್ ಬೌಲಿಂಗ್ ಮಾಡಿದ ಆರ್. ಅಶ್ವಿನ್, ಮೊದಲ ಎಸೆತದಲ್ಲಿ ಒಂದು ರನ್ ನೀಡಿದರು. 2ನೇ ಎಸೆತದಲ್ಲಿ ರನ್ ಗಳಿಸುವಲ್ಲಿ ಶಕಿಬ್ ಉಲ್ ಹಸನ್ (0) ವಿಫಲರಾಗಿದ್ದು, ಅಶ್ವಿನ್ ಹಾಕಿದ ಮೂರನೇ ಬಾಲ್ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟ್ ಆದರು. ಆಗ ಕೆಕೆಆರ್ ಗೆಲುವಿಗೆ 3 ಎಸೆತಗಳಲ್ಲಿ 6 ರನ್ ಬೇಕಿತ್ತು. ಆದರೆ ಬಳಿಕ ಬಂದ ಸುನಿಲ್ ನರೈನ್ (0) ಕೂಡ ತಾವೆದುರಿಸಿದ ಮೊದಲ ಬಾಲ್ನಲ್ಲೇ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ 6 ರನ್ ಅಗತ್ಯವಿತ್ತು. ಆಗ 5ನೇ ಎಸೆತವನ್ನು ರಾಹುಲ್ ತ್ರಿಪಾಠಿ (12) ಲಾಂಗ್ ಆಫ್ನತ್ತ ಸಿಕ್ಸರ್ಗೆ ಅಟ್ಟುವ ಗೆಲುವಿನ ನಿರೀಕ್ಷೆಯಲ್ಲಿದ್ದ ಡೆಲ್ಲಿಗೆ ಶಾಕ್ ನೀಡಿದರು. ಕೋಲ್ಕತ್ತಾ 3 ವಿಕೆಟ್ ಜಯದ ನಗೆ ಬೀರಿ 3ನೇ ಬಾರಿ ಫೈನಲ್ ಪ್ರವೇಶಿಸಿತು. 2012 ಮತ್ತು 2014ರಲ್ಲಿ ಕೆಕೆಆರ್ ಗಂಭೀರ್ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿದ್ದಲ್ಲದೆ, ಟ್ರೋಫಿ ಕೂಡ ಎತ್ತಿ ಹಿಡಿದಿತ್ತು.