ದುಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕಾಪಿಟಲ್ಸ್ ಪ್ರಯಾಸಪಟ್ಟು ಜಯಿಸಿದೆ. ಡೆಲ್ಲಿ ತಂಡ 19.4 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಚೆನ್ನೈ ನೀಡಿದ್ದ 136 ರನ್ಗಳ ಗುರಿ ತಲುಪಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಪಟ್ಟಿಯಲ್ಲಿ ಡೆಲ್ಲಿ ಅಗ್ರಸ್ಥಾನಕ್ಕೇರಿದೆ.
2021ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಗ್ರಸ್ಥಾನ ನಿರ್ಧರಿಸುವ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಚೆನ್ನೈನ ರುತುರಾಜ್ ಗಾಯಕ್ವಾಡ್(13) ಮತ್ತು ಡುಪ್ಲೆಸಿಸ್(10) ಪವರ್ ಪ್ಲೇ ಒಳಗೆ ಪೆವಿಲಿಯನ್ ಸೇರಿದರು. ನಂತರ ಬಂದ ಮೊಯಿನ್ ಅಲಿ 5 ರನ್ಗಳಿಸಿ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
14ನೇ ಆವೃತ್ತಿಯಲ್ಲಿ ಇಂದೇ ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಕನ್ನಡಿಗ ರಾಬಿನ್ ಉತ್ತಪ್ಪ 19 ರನ್ ಗಳಿಸಿ ನಿರಾಸೆ ಮೂಡಿಸಿದರು. ಇನ್ನು 62ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಧೋನಿ (17) ಮತ್ತು ರಾಯುಡು 5ನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಸೇರಿಸಿದರು. ರಾಯುಡು 55 ರನ್ಗಳಿಸಿ ತಂಡಕ್ಕೆ ಆಸರೆಯಾದರು. ಪರಿಣಾಮ ಚೆನ್ನೈ 136 ರನ್ಗಳ ಗುರಿ ದಾಖಲಿಸಿತು.
ಇನ್ನು ಚೆನ್ನೈ ಬ್ಯಾಟ್ಸಮನ್ಗಳನ್ನು ಕಟ್ಟಿಹಾಕುವಲ್ಲಿ ಕ್ಯಾಪಿಟಲ್ಸ್ ಬೌಲರ್ಗಳು ಯಶಸ್ವಿಯಾದರು. ಅಕ್ಷರ್ ಪಟೇಲ್ 18ಕ್ಕೆ 2 ವಿಕೆಟ್ ಪಡೆದರೆ, ಅಶ್ವಿನ್ 20ಕ್ಕೆ1, ನಾರ್ಟ್ಜ್ 37ಕ್ಕೆ1 ಮತ್ತು ಆವೇಶ್ ಖಾನ್ 35ಕ್ಕೆ 1 ವಿಕೆಟ್ ಪಡೆದರು.