ಅಬುಧಾಬಿ:ನಿರ್ಣಾಯಕ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬಲಿಷ್ಠ ಸಿಎಸ್‌ಕೆ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 190 ರನ್‌ಗಳ ಬೃಹತ್ ರನ್ ಗುರಿಯನ್ನು ಆರ್ಆರ್ 17.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು.
ಆರಂಭಿಕನಾಗಿ ಕಣಕ್ಕಿಳಿದಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಸೂಪರ್ ಕಿಂಗ್ಸ್‌ನ ಅಗ್ರ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 21 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಮೂರು ಸಿಕ್ಸರ್ ಸೇರಿ 50 ರನ್ ಗಳಿಸಿದರು. ಜೈಸ್ವಾಲ್ ವಿಕೆಟ್ ಬಳಿಕ ಬಂದ ಶಿವಂ ದುಬೆ ಸಿಡಿಲಬ್ಬರದ ಆಟದೊಂದಿಗೆ ಆರ್ ಆರ್‌ಗೆ ಗೆಲುವು ತಂದು ಕೊಟ್ಟರು. ದುಬೆ 42 ಎಸೆತಗಳಿಂದ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 64 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ಔಟಾಗದೆ ಉಳಿದರು.
ಆರಂಭಿಕ ಆಟಗಾರ ಎವಿನ್ ಲೆವಿಸ್ 12 ಎಸೆತ ಎದುರಿಸಿ 2 ಬೌಂಡರಿ 2 ಸಿಕ್ಸರ್‌ನೊಂದಿಗೆ 27 ರನ್ ಸಿಡಿಸಿದರು. ಸಂಜು ಸ್ಯಾಮನ್ಸ್ 28 ಹಾಗೂ ಔಟಾಗದೆ ಗ್ಲೆನ್ ಫಿಲಿಪ್ಸ್ 8 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್ ಸಹಿತ 14 ರನ್ ಗಳಿಸಿದರು. ಸಿಎಸ್‌ಕೆ ಪರ ಶಾರ್ದುಲ್ ಠಾಕೂರ್ 2 ಹಾಗೂ ಕೆಎಂ ಆಸೀಫ್ 1 ವಿಕೆಟ್ ಕಬಳಿಸಿದರು.