ಮುಂಬೈ:ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ಗಳು ಶಾಕ್ ನೀಡಿದ್ದಾರೆ. ಚೆನ್ನೈ ವಿರುದ್ಧ ರಾಜಸ್ಥಾನ ತಂಡ 45 ರನ್ಗಳಿಂದ ಸೋಲು ಕಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್...
ಮುಂಬೈನ ವಾಂಖೆಡೆಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸತತ ಮೂರನೇ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ ರುತುರಾಜ್ ಗಾಯಕ್ವಾಡ್ ಕೇವಲ 10 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಸ್ಫೋಟಕ ಬ್ಯಾಟಿಂಗ್ ಮುಂದಾದ ಫಾಫ್ ಡು ಪ್ಲೆಸಿಸ್ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 33 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಲು ಮುಂದಾಗಿ ಮೋರಿಸ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಬ್ಯಾಟ್ಸ್ಮನ್ಗಳು ತಂಡದ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿ ಬೇಗನೇ ವಿಕೆಟ್ ಒಪ್ಪಿಸಿದರು. ಮೊಯಿನ್ ಅಲಿ 20 ಎಸೆತಗಳಲ್ಲಿ 26 ರನ್ಗಳಿಸಿದರೆ, ರೈನಾ 18, ರಾಯುಡು 17 ಎಸೆತಗಳಲ್ಲಿ 3 ಸಿಕ್ಸರ್ಗಳ ಸಹಿತ 27 ರನ್ ಸಿಡಿಸಿದರು.
ನಂತರ ಬಂದ ಧೋನಿ 17 ಎಸೆತಗಳಲ್ಲಿ ಕೇವಲ 18 ರನ್ಗಳಿಸಿದರೆ ಔಟಾದರೆ, ಜಡೇಜಾ 8 ಸ್ಯಾಮ್ ಕರ್ರನ್ 13 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಅಬ್ಬರಿಸಿದ ಡ್ವೇನ್ ಬ್ರಾವೋ ಕೇವಲ 8 ಎಸೆತಗಳಲ್ಲಿ ಅಜೇಯ 20 ರನ್ಗಳಿಸಿ 189 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು.
ರಾಜಸ್ಥಾನ ರಾಯಲ್ಸ್ ಪರ ಚೇತನ್ ಸಕಾರಿಯಾ 36ಕ್ಕೆ3, ಕ್ರಿಸ್ ಮೋರಿಸ್ 33ಕ್ಕೆ 2, ರಾಹುಲ್ ತೆವಾಟಿಯಾ 21ಕ್ಕೆ1 ಮತ್ತು ರೆಹಮಾನ್ 37ಕ್ಕೆ 1 ವಿಕೆಟ್ ಪಡೆದರು.
ರಾಜಸ್ಥಾನ ರಾಯಲ್ಸ್ ಇನ್ನಿಂಗ್ಸ್...
ಬ್ಯಾಟ್ಸ್ಮನ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ 3 ಬಾರಿಯ ಐಪಿಎಲ್ ಚಾಂಪಿಯನ್ ಸಿಎಸ್ಕೆ ಎದುರಾಳಿ ರಾಜಸ್ಥಾನ ತಂಡಕ್ಕೆ 189 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡ ಉತ್ತಮವಾಗಿ ಬ್ಯಾಟಿಂಗ್ ಆರಂಭಿಸಿದರು. ಜೋಸ್ ಬಟ್ಲರ್ ಜವಾಬ್ದಾರಿಯುತ ಆಟವನ್ನೇ ಪ್ರದರ್ಶಿಸಿ ಮುನ್ನುಗ್ಗುತ್ತಿದ್ದರು. ಮನನ್ ವೋಹ್ರಾ 14 ರನ್ಗಳನ್ನು ಕಲೆ ಹಾಕಿ ಸ್ಯಾಮ್ ಕರ್ರನ್ಗೆ ವಿಕೆಟ್ ನೀಡಿದರು.
ವೋಹ್ರಾ ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲೇ ಇಲ್ಲ. ಕೇವಲ ಒಂದು ರನ್ ಗಳಿಸಿ ಸ್ಯಾಮ್ ಕರ್ರನ್ಗೆ ವಿಕೆಟ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಉತ್ತಮವಾಗಿಯೇ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಜೋಸ್ ಬಟ್ಲರ್ 35 ಎಸೆತಗಳಲ್ಲಿ ಎರಡು ಸಿಕ್ಸರ್, ಐದು ಬೌಂಡರಿಗಳ ನೆರವಿನಿಂದ 49 ರನ್ಗಳನ್ನು ಗಳಿಸಿ ಜಡೇಜಾಗೆ ವಿಕೆಟ್ ನೀಡಿ ಅರ್ಧ ಶತಕ ವಂಚಿತರಾದರು.
ಬಳಿಕ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಹೆಚ್ಚು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು. ಶಿವಂ ದುಬೆ 17 ರನ್, ಡೇವಿಡ್ ಮಿಲ್ಲರ್ 2 ರನ್, ರಿಯಾನ್ ಪರಾಗ್ 3, ತೆವಾಟಿಯ 20 ಮತ್ತು ಜಯದೇವ್ ಉನಾದ್ಕತ್ 24 ರನ್ ಗಳಿಸಿ ಔಟಾದರು.
ಶೂನ್ಯ ಸುತ್ತಿದ ಮೂವರು....
ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮೂವರು ರನ್ಗಳ ಖಾತೆ ತೆಗೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಕೊನೆಯ ಪಂದ್ಯದ ಹೀರೋ ಆಗಿದ್ದ ಕ್ರಿಸ್ ಮೋರಿಸ್ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಉತ್ತಮ ಬೌಲಿಂಗ್ ನಡೆಸಿದ ಚೇತನ್ ಸಕಾರಿಯಾ ಡಕ್ ಔಟ್ ಆಗಿದ್ದಾರೆ. ಮುಸ್ತುಫಿಜರ್ ಸಹ ರನ್ಗಳ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು.
ರಾಜಸ್ಥಾನ ತಂಡ ಮಧ್ಯಮ ಕ್ರಮಾಂಕದಿಂದ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಚೆನ್ನೈ ನೀಡಿದ ಗುರಿಯನ್ನ ಮುಟ್ಟುವಲ್ಲಿ ಎಡವಿದ ರಾಜಸ್ಥಾನ 45 ರನ್ಗಳಿಂದ ಸೋಲು ಕಂಡಿತು.
ಮಂಗಳವಾರ ಸಂಜೆ 7.30ಕ್ಕೆ ಚೆನ್ನೈನಲ್ಲಿ ಮುಂಬೈ ವಿರದ್ಧ ಡೆಲ್ಲಿ ಕಾದಾಟ ನಡೆಸಲಿದೆ.