ಮುಂಬೈ (ಮಹಾರಾಷ್ಟ್ರ):ಐಪಿಎಲ್ನ 1000ನೇ ಪಂದ್ಯ ಹಾಗೂ ಈ ಋತುವಿನ 42ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಅವರ ಹುಟ್ಟುಹಬ್ಬದಂದು ಅತ್ಯಂತ ವಿಶೇಷವಾದ ಗೆಲುವಿನ ಉಡುಗೊರೆಯನ್ನು ನೀಡಿದ್ದಾರೆ. ಮುಂಬೈ ತಂಡದ ಗೆಲುವಿನ ಹೀರೋ ಆಗಿದ್ದ ಆಸ್ಟ್ರೇಲಿಯಾದ ಆಲ್ ರೌಂಡರ್ ಟಿಮ್ ಡೇವಿಡ್, ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಎಲ್ಲರನ್ನೂ ಬೆರಗಾಗಿಸಿದರು.
ಕೊನೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ 17 ರನ್ ಅವಶ್ಯಕತೆ ಇತ್ತು. ಕೊನೆಯ ಓವರ್ ಜವಾಬ್ದಾರಿಯನ್ನು ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ ಅನುಭವಿ ಕೆರಿಬಿಯನ್ ಆಟಗಾರ ಜೇಸನ್ ಹೋಲ್ಡರ್ಗೆ ಕೊಡುತ್ತಾರೆ. 11 ಬಾಲ್ ಎದರಿಸಿ 27 ರನ್ನಿಂದ ಕ್ರೀಸ್ನಲ್ಲಿದ್ದ ಟಿಮ್ ಡೇವಿಡ್ ಕೇವಲ ಮೂರು ಬಾಲ್ನಲ್ಲಿ ಪಂದ್ಯವನ್ನು ಗೆಲ್ಲಿಸುತ್ತಾರೆ. 20 ನೇ ಓವರ್‌ನ ಮೊದಲ ಮೂರು ಬಾಲ್ನ್ನು ಡೇವಿಡ್ ಸಿಕ್ಸ್ಗೆ ಅಟ್ಟಿ 321.42 ಸ್ಟ್ರೈಕ್ ರೇಟ್‌ನಲ್ಲಿ 14 ಎಸೆತಗಳಲ್ಲಿ 45 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್ನಲ್ಲಿ 5 ಸಿಕ್ಸ್ ಮತ್ತು 2 ಬೌಂಡರಿಗಳನ್ನು ಒಳಗೊಂಡಿತ್ತು.
ಪಂದ್ಯದ ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಟಿಮ್ ಡೇವಿಡ್ ಬಾರಿಸಿದ ಸಿಕ್ಸರ್ ಚರ್ಚೆಯ ವಿಷಯವಾಗಿದೆ. ವಾಂಖೆಡೆ ಸ್ಟೇಡಿಯಂನ ಡಗೌಟ್‌ನಲ್ಲಿ ಕುಳಿತಿದ್ದ ಸಚಿನ್ ತೆಂಡೂಲ್ಕರ್, ಜೇಸನ್ ಎಸೆತದಲ್ಲಿ ಟಿಮ್ ಡೇವಿಡ್ 84 ಮೀಟರ್ ಎತ್ತರದ ಸಿಕ್ಸರ್ ಬಾರಿಸಿದಾಗ ಸ್ಟೇಡಿಯಂನಲ್ಲಿದ್ದ ಎಲ್ಲರೂ ಸಂತೋಷದಿಂದ ಜಿಗಿದರು. ಡಗೌಟ್‌ನಲ್ಲಿ ಕುಳಿತಿದ್ದ ಸಚಿನ್ ತೆಂಡೂಲ್ಕರ್ ಸಹ ಎದ್ದುನಿಂತು ಅಚ್ಚರಿ ಆಟ ಎಂಬಂತೆ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ.