ಬೆಂಗಳೂರು:ಐಪಿಎಲ್ 2023 ರ 36 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿರುವ ವಿಚಾರ ಗೊತ್ತೇ ಇದೆ. ಈ ಪಂದ್ಯದಲ್ಲಿ ಆರ್‌ಸಿಬಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.
ಇತಿಹಾಸ ಸೃಷ್ಟಿಸಿದ ವಿರಾಟ್: ವಿರಾಟ್ ಕೊಹ್ಲಿ ಈಗ ಬೆಂಗಳೂರಿನ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ 3000ಕ್ಕೂ ಹೆಚ್ಚು ಟಿ20 ರನ್ ಗಳಿಸಿದ್ದಾರೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರಲ್ಲಿ ಕೊಹ್ಲಿ ಮೊದಲಿಗರಾಗಿದ್ದಾರೆ.
ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ ಅವರು ಮೀರ್‌ಪುರದಲ್ಲಿ 2989 ಗಳಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಬಾಂಗ್ಲಾದೇಶದ ಮತ್ತೊಬ್ಬ ಆಟಗಾರ ಮಹಮ್ಮದುಲ್ಲಾ ಅವರು ಮೀರ್‌ಪುರದಲ್ಲಿಯೇ 2813 ಟಿ20 ರನ್ಗಳಿಸಿದ್ದಾರೆ. ನಾಲ್ಕನೇ ಹೆಸರು ಅಲೆಕ್ಸ್ ಹೇಲ್ಸ್ ಅವರದ್ದಾಗಿದೆ. ನಾಟಿಂಗ್ ಹ್ಯಾಮ್ನಲ್ಲಿ ಹೇಲ್ಸ್ 2749 ರನ್ ಗಳಿಸಿದ್ದಾರೆ.
ಮಿಂಚಿದ ಕೆಕೆಆರ್ ಬ್ಯಾಟ್ಸ್‌ಮನ್‌ಗಳು:ಈ ಪಂದ್ಯದಲ್ಲಿ ಕೆಕೆಆರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಸ್ಕೋರ್ಬೋರ್ಡ್ನಲ್ಲಿ 200 ರನ್ ಗಳಿಸಿತ್ತು. ಆರಂಭದಿಂದಲೂ ಕೆಕೆಆರ್ ಬ್ಯಾಟ್ಸ್‌ಮನ್‌ಗಳು ಭರ್ಜರಿ ಬ್ಯಾಟಿಂಗ್ ನಡೆಸಿದರು. ಜೇಸನ್ ರಾಯ್ ಇನಿಂಗ್ಸ್‌ನ ಮೊದಲ ಓವರ್‌ನಿಂದಲೇ ಪ್ರಬಲ ಹೊಡೆತಗಳನ್ನು ಆಡುವ ಮೂಲಕ 56 ರನ್ಗಳನ್ನು ಕಲೆ ಹಾಕಿದ್ದರು. ಎನ್ ಜಮದೀಶನ್ ಕೂಡ 27 ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ 31 ಮತ್ತು ನಿತೀಶ್ ರಾಣಾ 41 ರನ್ ಗಳಿಸಿದರು. ಇದಲ್ಲದೇ ರಿಂಕು ಸಿಂಗ್ ಕೊನೆಯಲ್ಲಿ 18 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು.