ಮುಂಬೈ: ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ಮೂಲಕ ಸ್ಯಾಮ್ಸನ್ ಪಡೆ 2ನೇ ಅಗ್ರ ತಂಡವಾಗಿ ಪ್ಲೇ ಆಫ್ ಹಂತ ತಲುಪಿದೆ.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ಚೆನ್ನೈ ಪರ ಮೋಯಿನ್ ಅಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 57 ಎಸೆತದಲ್ಲಿ ಬರೋಬ್ಬರಿ 93 ರನ್ ಬಾರಿಸಿ ತಂಡವು 150ರ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಗಾಯಕ್ವಾಡ್ 2, ಡೆವೋನ್ ಕಾನ್ವೆ 16, ನಾಯಕ ಧೋನಿ 26 ರನ್ ಗಳಿಸಿದರು. ಉಳಿದ ಬ್ಯಾಟರ್ಗಳು ನಿರಾಸೆ ಮೂಡಿಸಿದರು.
ಓದಿ:2023ರ ಐಪಿಎಲ್ನಲ್ಲಿ ಧೋನಿ ಆಡ್ತಾರಾ?.. ಕೊನೆ ಪಂದ್ಯದಲ್ಲಿ ಗುಟ್ಟು ರಟ್ಟು ಮಾಡಿದ ಸಿಎಸ್ಕೆ ಕ್ಯಾಪ್ಟನ್!
ಮೊಯೀನ್ ಅಬ್ಬರದ ನಡುವೆಯೂ ಉತ್ತಮ ಬೌಲಿಂಗ್ ಮಾಡಿದ ರಾಜಸ್ಥಾನ್ ಬೌಲರ್ಗಳು, ಚೆನ್ನೈ ಬ್ಯಾಟರ್ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಈ ಮೂಲಕ ಸಿಎಸ್ಕೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು. ರಾಯಲ್ಸ್ ಪರ ಚಹಲ್ ಮತ್ತು ಒಬೆಡ್ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಟ್ರೆಂಟ್ ಬೋಲ್ಟ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 151 ರನ್ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ 2 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಆಘಾತ ಎದುರಾಯಿತು. ಆದರೆ ಎದೆಗುಂದದೆ ಬ್ಯಾಟಿಂಗ್ ಮುಂದುವರೆಸಿದ ಯುವ ಆಟಗಾರ ಯಶಸ್ವಿ ಜೈಸ್ವಾಲ್ 44 ಎಸೆತದಲ್ಲಿ 59 ರನ್ ಗಳಿಸಿ ತಂಡಕ್ಕೆ ನೆರವಾದರು.
ಬಳಿಕ ನಾಯಕ ಸ್ಯಾಮ್ಸನ್ 15, ದೇವದತ್ತ ಪಡಿಕಲ್ 3 ಹಾಗೂ ಹೇಟ್ಮೇರ್ 6 ರನ್ ಗಳಿಸಿ ಔಟಾಗುವ ಮೂಲಕ ರಾಯಲ್ಸ್ಗೆ ಕೊಂಚ ಆತಂಕ ಮೂಡಿತ್ತು. ಆದರೆ ರವಿಚಂದ್ರನ್ ಅಶ್ವಿನ್ 40 ಮತ್ತು ರಿಯಾನ್ ಪರಾಗ್ 10 ರನ್ ಬಾರಿಸಿ ಅಜೇಯರಾಗುಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.
ಚೆನ್ನೈ ಪರ ಪ್ರಶಾಂತ್ ಸೋಲಂಕಿ 2 ವಿಕೆಟ್ ಪಡೆದರೆ, ಸಿಮ್ರಜಿತ್ ಸಿಂಗ್, ಮಿಚೆಲ್ ಮತ್ತು ಮೋಯಿನ್ ಅಲಿ ತಲಾ 1 ವಿಕೆಟ್ ಪಡೆದರು. ರಾಯಲ್ಸ್ 5 ವಿಕೆಟ್ ಗೆಲುವು ದಾಖಲಿಸಿ ಲೀಗ್ ಹಂತ ಮುಗಿಸಿದರೆ, 4 ಬಾರಿ ಚಾಂಪಿಯನ್ ಧೋನಿ ಪಡೆ ಕೊನೆಯ ಪಂದ್ಯದಲ್ಲಿಯೂ ಮುಖಭಂಗದೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.