ದುಬೈ:'14ನೇ ಆವೃತ್ತಿಯ ಐಪಿಎಲ್ ಗೆಲ್ಲಲು ಯಾವುದೇ ತಂಡ ಅರ್ಹವಾಗಿದ್ದರೆ, ಅದು ಕೆಕೆಆರ್ ಎಂದು ನನಗೆ ಅನಿಸುತ್ತದೆ. ಟೂರ್ನಿಯ ನಡುವೆ ಲಭಿಸಿದ ವಿರಾಮವು ಕೋಲ್ಕತ್ತಾ ಯಶಸ್ಸಿಗೆ ನೆರವಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದರು.
14ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 27 ರನ್ಗಳಿಂದ ಗೆದ್ದ ಸಿಎಸ್‌ಕೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯದ ಬಳಿಕ ಮಾತನಾಡಿದ ಧೋನಿ, ಕೆಕೆಆರ್ ಕಮ್ಬ್ಯಾಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಎಸ್‌ಕೆ ಗೆಲುವಿನ ಬಗ್ಗೆ ಮಾತನಾಡುವ ಮೊದಲು, ನಾನು ಕೆಕೆಆರ್ ಬಗ್ಗೆ ಮಾತನಾಡುವುದು ಮುಖ್ಯ. ಐಪಿಎಲ್ ಮೊದಲ ಹಂತದ ಬಳಿಕ ಕೋಲ್ಕತ್ತಾ ತಂಡವಿದ್ದ ಸ್ಥಾನ ನೋಡಿದರೆ ಕಮ್ಬ್ಯಾಕ್ ಮಾಡಿರುವುದನ್ನು ಸಾಧಿಸುವುದು ತುಂಬಾ ಕಷ್ಟ. ಹೀಗಾಗಿ ಈ ಬಾರಿ ಕೆಕೆಆರ್ ಐಪಿಎಲ್ ಗೆಲ್ಲುವ ಅರ್ಹ ತಂಡವಾಗಿತ್ತು ಎಂದರು.
ಪ್ರತಿ ಫೈನಲ್ ಕೂಡ ಸ್ಪೆಷಲ್ :
ಸಿಎಸ್‌ಕೆ ತಂಡದಲ್ಲಿ ನಾವು ಕೆಲವರನ್ನು ಬದಲಾಯಿಸಿದ್ದಲ್ಲದೆ, ಆಟಗಾರರನ್ನು ವಿಭಿನ್ನವಾಗಿ ಬಳಸಿದ್ದೇವೆ. ಈ ಜವಾಬ್ದಾರಿ ತೆಗೆದುಕೊಳ್ಳುವುದು ಮುಖ್ಯವಾಗಿತ್ತು. ಪ್ರತಿ ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ ನಾವು ಮ್ಯಾಚ್ ವಿನ್ನರ್ಗಳನ್ನು ಪಡೆದೆವು ಎಂದನಿಸುತ್ತದೆ. ಉತ್ತಮ ಫಾರ್ಮ್ನಲ್ಲಿದ್ದವರು ಟೂರ್ನಿಯುದ್ದಕ್ಕೂ ರನ್ ಪೇರಿಸಿದ್ದಾರೆ. ಪ್ರತಿ ಫೈನಲ್ ಕೂಡ ವಿಶೇಷತೆಯಿಂದ ಕೂಡಿರುತ್ತದೆ. ಅಂಕಿ-ಅಂಶಗಳ ಪ್ರಕಾರ ನಮ್ಮದು ಅತ್ಯಂತ ಸ್ಥಿರವಾದ ತಂಡ, ಆದರೆ ನಾವೂ ಕೂಡ ಫೈನಲ್‌ಗಳಲ್ಲಿ ಸೋಲು ಕಂಡಿದ್ದೇವೆ ಎಂದು ಹೇಳಿದರು.
'ಚಿಪಾಕ್'ನಲ್ಲಿದ್ದಂತೆ ಅನಿಸುತ್ತಿದೆ:
ಮುಂಬರುವ ವರ್ಷಗಳಲ್ಲಿ ಸಿಎಸ್‌ಕೆ ಇನ್ನಷ್ಟು ಸುಧಾರಣೆ ಹೊಂದಲಿದೆ. ನಮ್ಮ ಅಭ್ಯಾಸದ ಅವಧಿಗಳು ಆಟಗಾರರೊಂದಿಗಿನ ಮಾತುಕತೆ, ಸಭೆಯಂತೆಯೇ ಇರುತ್ತವೆ ಎಂದ ಎಂಎಸ್ಡಿ, ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ಈಗ ದುಬೈನಲ್ಲಿದ್ದೇವೆ, ಆದರೆ ನಾವು ದಕ್ಷಿಣ ಆಫ್ರಿಕಾದಲ್ಲಿ ಆಡಿದಾಗಲೂ ಉತ್ತಮ ಬೆಂಬಲ ಸಿಕ್ಕಿದೆ, ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ಇದ್ದಂತೆಯೇ ಅನಿಸುತ್ತಿದೆ. ಎಲ್ಲರಿಗೂ ಧನ್ಯವಾದಗಳು, ಮುಂದಿನ ವರ್ಷ ಮರಳಿ ಚೆನ್ನೈನಲ್ಲಿ ಅಭಿಮಾನಿಗಳ ಎದುರು ಆಡುವ ಅವಕಾಶ ಸಿಗುವಂತಾಗಲಿ ಎಂದು ಧೋನಿ ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ:IPL 2021: ಫೈನಲ್ನಲ್ಲಿ ಮುಗ್ಗರಿಸಿದ KKR... 4ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಧೋನಿ ಪಡೆ