ಕೋಲ್ಕತ್ತಾ:ಹಲವಾರು ವಿಷಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸೌರವ್ ಗಂಗೂಲಿ ಅವರನ್ನು ಕೈಬಿಟ್ಟ ವಿಷಯದಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಅವರನ್ನು ಬಿಸಿಸಿಐ ಕಾರ್ಯದರ್ಶಿಯನ್ನಾಗಿ ಮುಂದುವರಿಸಿರುವುದನ್ನು ಪ್ರಶ್ನಿಸಿರುವ ದೀದಿ, ಸೌರವ್ ಗಂಗೂಲಿಯವರನ್ನು ಬಿಸಿಸಿಐ ಅಧ್ಯಕ್ಷರಾಗಿ ನೇಮಿಸುವಂತೆ ತಾವು ಮನವಿ ಮಾಡಿದ್ದನ್ನು ಉಲ್ಲೇಖಿಸಿದ್ದಾರೆ.
ಗಂಗೂಲಿಯವರ ತಪ್ಪೇನು? ಅಮಿತ್ ಶಾ ಅವರ ಮಗ ಮಂಡಳಿಯಲ್ಲಿ ಇರಬಹುದಾದರೆ, ಸೌರವ್ ಏಕೆ ಇರಬಾರದು ಎಂದು ಸಿಎಂ ಮಮತಾ ಉತ್ತರ ಬಂಗಾಳಕ್ಕೆ ಪ್ರವಾಸಕ್ಕೆ ತೆರಳುವ ಮೊದಲು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಪ್ರಶ್ನಿಸಿದರು. ಗಂಗೂಲಿ ಬಂಗಾಳದ ಹೆಮ್ಮೆ. ನಾನು ಯಾರನ್ನೂ ಟೀಕಿಸುತ್ತಿಲ್ಲ. ಯಾರು ಉತ್ತಮ ಕೆಲಸ ಮಾಡುತ್ತಾರೋ ಅವರಿಗೆ ಮೆಚ್ಚುಗೆ ಸಿಗುತ್ತದೆ. ಕಳಪೆ ಕೆಲಸ ಮಾಡುವವರಿಗೆ ಮೆಚ್ಚುಗೆ ಸಿಗಲ್ಲ ಎಂದು ಹೇಳಿದರು.