ದುಬೈ:ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಗಾಗಿ ಪ್ರತಿ ಸಲ ನಾನು ಶೇ. 120ರಷ್ಟು ಶ್ರಮಪಟ್ಟಿದ್ದೇನೆ. ಅದನ್ನು ಮುಂದೆಯೂ ಕೂಡ ಓರ್ವ ಆಟಗಾರನಾಗಿ ಮುಂದುವರೆಸುತ್ತೇನೆ ಎಂದು ಆರ್ಸಿಬಿ ನಾಯಕನಾಗಿ ಸೋಮವಾರ ಕೊನೆಯ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಹೇಳಿದ್ದಾರೆ.
14ನೇ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 4 ವಿಕೆಟ್ಗಳಿಂದ ಸೋತ ಆರ್ಸಿಬಿ ಟೂರ್ನಿಯಿಂದ ಹೊರಬಿದ್ದಿದೆ. ಇದು ನಾಯಕನಾಗಿ ಕೊಹ್ಲಿಗೆ ಕೊನೆಯ ಟೂರ್ನಿಯಾಗಿತ್ತು. ದುಬೈನಲ್ಲಿ ಐಪಿಎಲ್ ಪುನಾರಂಭವಾಗುವ ಸಂದರ್ಭದಲ್ಲೇ ವಿರಾಟ್ ಈ ಬಗ್ಗೆ ಘೋಷಿಸಿದ್ದರು. ಸೋಲಿನ ಬಳಿಕ ಪ್ರತಿಕ್ರಿಯಿಸಿದ ಅವರು, ನಾಯಕನಾಗಿ ಭಾರತ ತಂಡದಲ್ಲಿ ಕಾರ್ಯ ನಿರ್ವಹಿಸಿದಂತೆ ಐಪಿಎಲ್ನಲ್ಲೂ ಆರ್ಸಿಬಿಗಾಗಿ ನನ್ನ ಕೈಲಾದಷ್ಟು ಭಾಗಿಯಾಗಿದ್ದೇನೆ ಎಂದರು.
ಬೆಂಗಳೂರು ತಂಡದಲ್ಲಿ ಆಡುವ ಯುವಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಲ್ಲದೆ, ನಂಬಿಕೆಯೊಂದಿಗೆ ಆಡುವ ಸಂಸ್ಕೃತಿಯನ್ನು ಸೃಷ್ಟಿಸಲು ಯತ್ನಿಸಿದ್ದೇನೆ. ಮುಂಬರುವ ದಿನಗಳಲ್ಲಿ ತಂಡವನ್ನು ಯಾರು ಮುನ್ನಡೆಸುತ್ತಾರೋ ಅವರೊಂದಿಗೆ ಟೀಂ ಬಲಪಡಿಸುವ ಹಾಗೂ ಪುನರ್ ರಚಿಸುವ ಕಾರ್ಯದಲ್ಲಿ ಮುಂದಿನ ಮೂರು ವರ್ಷಗಳ ಕಾಲ ನೆರವಾಗಲು ಬಯಸುತ್ತೇನೆ ಎಂದಿದ್ದಾರೆ.
ಅಲ್ಲದೆ, ಮುಂದಿನ ಆವೃತ್ತಿಗಳಲ್ಲಿ ಖಂಡಿತವಾಗಿಯೂ ಆರ್ಸಿಬಿ ತಂಡದಲ್ಲಿಯೇ ಮುಂದುವರೆಯುತ್ತೇನೆ. ಬೇರೆ ಯಾವ ತಂಡದಲ್ಲಿಯೂ ಕಾಣಿಸಿಕೊಳ್ಳಲು ಬಯಸುವುದಿಲ್ಲ. ಲೌಕಿಕ ಸುಖಗಳಿಗಿಂತ ನನಗೆ ನಿಷ್ಠೆಯೇ ಮುಖ್ಯ. ನಾನು ಐಪಿಎಲ್‌ನಲ್ಲಿ ಆಡುವ ಕೊನೆಯ ದಿನದವರೆಗೂ ನಾನು ಆರ್‌ಸಿಬಿಯಲ್ಲಿಯೇ ಇರುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ:IPL-2021: KKR ವಿರುದ್ಧ ಸೋತು ಹೊರಬಿದ್ದ RCB... ಮತ್ತೆ ಭಗ್ನಗೊಂಡ ಕಪ್ ಗೆಲ್ಲುವ ಕನಸು