ಶಾರ್ಜಾ:ಕೆಕೆಆರ್ ವಿರುದ್ಧದ ಸೋಲಿನ ಬಗ್ಗೆ ಮಾತನಾಡಲು ನನ್ನ ಬಳಿ ಪದಗಳೇ ಇಲ್ಲ, ಏನನ್ನೂ ಹೇಳಲು ಸಾಧ್ಯವಿಲ್ಲ. ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದೆವು. ಬೌಲರ್ಗಳು ಬಹುತೇಕ ಗೆಲುವಿನತ್ತ ಕೊಂಡೊಯ್ದರೂ ಕೂಡ ಕೊನೆಯಲ್ಲಿ ಯಶ ಕಾಣದಿರುವುದು ದುರದೃಷ್ಟಕರ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಭಾವುಕರಾದರು.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ಗಳಿಂದ ಸೋಲುಂಡು ಐಪಿಎಲ್ನಿಂದ ಹೊರಬಿದ್ದಿತು. ಕೊನೆಯ ಓವರ್ನಲ್ಲಿ ಗೆಲುವಿನ ಸನಿಹ ಬಂದರೂ ಕೂಡ ಬ್ಯಾಟರ್ ರಾಹುಲ್ ತ್ರಿಪಾಠಿ ಸಿಕ್ಸರ್ ಸಿಡಿಸಿ ಕೆಕೆಆರ್ ತಂಡವನ್ನು ಫೈನಲ್‌ಗೆ ಕೊಂಡೊಯ್ದರು.
ಪಂದ್ಯದ ಬಳಿಕ ಮಾತನಾಡಿದ ಪಂತ್, ಕೋಲ್ಕತ್ತಾ ತಂಡದವರು ಮಧ್ಯಮ ಓವರ್‌ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದರು. ಹೀಗಾಗಿ ನಾವು ಒತ್ತಡಕ್ಕೆ ಸಿಲುಕಿದ್ದಲ್ಲದೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಡೆಲ್ಲಿ ತಂಡವು ಸದಾ ಸಕಾರಾತ್ಮಕವಾಗಿದ್ದು, ಮುಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ. ನಾವು ಇಲ್ಲಿಯವರೆಗೆ ಉತ್ತಮ ಕ್ರಿಕೆಟ್ ಆಡಿದ್ದೇವೆ, ಟೂರ್ನಿಯಲ್ಲಿ ಏರಿಳಿತಗಳು ಸಹಜ ಎಂದರು.
2012ರ ಐಪಿಎಲ್ ಬಳಿಕ ಲೀಗ್ ಹಂತದ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಕೂಡ ಡೆಲ್ಲಿ 2ನೇ ಬಾರಿಗೆ ಫೈನಲ್‌ಗೆ ತಲುಪುವಲ್ಲಿ ವಿಫಲವಾಗಿದೆ. ಅ. 15ರಂದು ದುಬೈನಲ್ಲಿ ನಡೆಯಲಿರುವ 2021ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಸಿಎಸ್ಕೆ ಹಾಗೂ ಕೆಕೆಆರ್ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ.
ಇದನ್ನೂ ಓದಿ:IPL 2021: ಡೆಲ್ಲಿಗೆ ವಿರೋಚಿತ ಸೋಲು... ಮೂರನೇ ಬಾರಿಗೆ ಫೈನಲ್ ತಲುಪಿದ KKR