ಜೈಪುರ (ರಾಜಸ್ಥಾನ): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಸೋಲಿನ ನಂತರ ಭಾನುವಾರದಂದು ಮಾತನಾಡಿದ ನಾಯಕ ಸಂಜು ಸ್ಯಾಮ್ಸನ್ "59 ರನ್ ತಂಡ ಕುಸಿತ ಕಾಣಲು ಕಾರಣ ಏನು ಎಂದು ನನಗೂ ತಿಳಿದಿಲ್ಲ ಎಂದು ಪ್ರಾಮಾಣಿಕ ಉತ್ತರವನ್ನು ನೀಡಿದ್ದಾರೆ.
ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಬೆಂಗಳೂರು ತಂಡವು ಸತತ ಎರಡು ಸೋಲಿನ ನಂತರ, ಟೇಬಲ್‌ನಲ್ಲಿ ನಿರ್ಣಾಯಕ ಎರಡು ಅಂಕಗಳನ್ನು ಪಡೆದು 5ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ವೇಯ್ನ್ ಪಾರ್ನೆಲ್ (3/10) ನೇತೃತ್ವದ ಆರ್‌ಸಿಬಿ ಬೌಲರ್‌ಗಳು ಪವರ್‌ಪ್ಲೇ ಒಳಗೆ ಆರ್ಆರ್ನ ಐದು ವಿಕೆಟ್‌ಗಳನ್ನು ಕೆಡವಿದರು. ಇದರಿಂದ 11 ಓವರ್‌ಗಳಲ್ಲಿ 59 ರನ್‌ಗಳಿಗೆ ರಾಜಸ್ಥಾನ ರಾಯಲ್ಸ್ ಆಲೌಟ್ ಆಯಿತು.
"59 ರನ್ಗೆ ಬ್ಯಾಟಿಂಗ್ ಕುಸಿತ ಕಾಣುವಲ್ಲಿ ನಾವು ಎಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದೇವೆ ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ. ಇದಕ್ಕೆ ಸಧ್ಯ ನನ್ನ ಬಳಿ ಇನ್ನೂ ಉತ್ತರವಿಲ್ಲ ಎಂದು ನಾನು ಭಾವಿಸುತ್ತೇನೆ. ನಮಗೆಲ್ಲರಿಗೂ ಐಪಿಎಲ್ ಸ್ವರೂಪ ತಿಳಿದಿದೆ, ಲೀಗ್ ಹಂತದಲ್ಲಿ ಕೆಲವು ತಮಾಷೆಯ ಸಂಗತಿಗಳನ್ನು ನಾವು ನೋಡಿದ್ದೇವೆ. ನಾವು ದೃಢವಾಗಿ ಉಳಿಯಬೇಕು, ಒಂದು ದಿನ ರಜೆ ತೆಗೆದುಕೊಳ್ಳಬೇಕು ಮತ್ತು ಧರ್ಮಶಾಲಾದಲ್ಲಿ ಆಟದ ಬಗ್ಗೆ ಯೋಚಿಸಬೇಕು. ನಾವು ಬಲವಾಗಿ ಮುಂದಿನ ಪಂದ್ಯದಲ್ಲಿ ಎದ್ದು ಬರಬೇಕಿದೆ. ಈ ಪ್ರದರ್ಶನಕ್ಕಾಗಿ ನಾವು ಒಟ್ಟಾರೆಯಾಗಿ ತಂಡವಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು" ಎಂದು ಸ್ಯಾಮ್ಸನ್ ಪೋಸ್ಟ್ ಮ್ಯಾಚ್ ಕಾರ್ಯಕ್ರಮದಲ್ಲಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು,"ಇದರ ಯಶಸ್ಸು ಆರ್‌ಸಿಬಿ ಬೌಲರ್ಗಳಿಗೆ ಸಲ್ಲುತ್ತದೆ. ಪವರ್ ಪ್ಲೇಯ ವೇಳೆಗೆ ಹಿಡಿತ ಸಾಧಿಸಿದರು. ಈ ಪಂದ್ಯವನ್ನು ಇಷ್ಟು ಬೇಗ ವಿಮರ್ಶೆ ಮಾಡಲು ಸಾಧ್ಯವಿಲ್ಲ. ನಮ್ಮ ಆರಂಭಿಕ ಬ್ಯಾಟರ್ಗಳು ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರೆ ಇಂದು ಸಾಧ್ಯವಾಗಿಲ್ಲ. ನಾವು ಬಾಲ್ ಹಳೆಯದಾಗುವವರೆಗೆ ಕಾದು ದೊಡ್ಡ ಹೊಡೆತಗಳಿಗೆ ಮುಂದಾಗಬೇಕಿತ್ತು" ಎಂದಿದ್ದಾರೆ.