ಚೆನ್ನೈ: ಇಂದು ಎರಡನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿವೆ. ಹ್ಯಾಟ್ರಿಕ್ ಸೋಲಿನ ಬಳಿಕ ಸಖತ್ ಕಮ್ಬ್ಯಾಕ್ ಮಾಡಿರುವ ಸನ್ ರೈಸರ್ಸ್ ಹೈದರಾಬಾದ್ ಇಂದಿನ ಪಂದ್ಯ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನ ಬಲಪಡಿಸಿಕೊಳ್ಳುವ ಕಾತುರದಲ್ಲಿದೆ. ಇತ್ತ ಡೆಲ್ಲಿ ತಂಡವು ಕೂಡ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಅದ್ಭುತ ಗೆಲವು ದಾಖಲಿಸಿದ್ದು, ಅದೇ ಉತ್ಸಾಹದಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದೆ. ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತಿರುವ ಸ್ಪರ್ಧಾತ್ಮಕ ಪಿಚ್‌ನಲ್ಲಿ ಕಠಿಣ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.
ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋ ಜೋಡಿ ಆರಂಭದಲ್ಲಿ ಉತ್ತಮ ರನ್ ಗಳಿಸುತ್ತಿದ್ದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ತಂಡದ ಪಾಲಿಗೆ ದೊಡ್ಡ ಚಿಂತೆಯಾಗಿದೆ. ಕೇನ್ ವಿಲಿಯಮ್ಸನ್ ಫಿಟ್ ಆಗಿ ತಂಡಕ್ಕೆ ವಾಪಸಾಗಿರುವುದು ತಂಡಕ್ಕೆ ಬಲ ಬಂದಿದೆ. ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವು ಕಂಡಿರುವ ಸನ್ ರೈಸರ್ಸ್ ತಂಡ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಹೈದರಾಬಾದ್ ತಂಡ ವಾರ್ನರ್, ಬೇರ್‌ಸ್ಟೋ, ವಿಲಿಯಮ್ಸನ್, ರಶೀದ್ ಖಾನ್ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ.
ಮತ್ತೊಂದೆಡೆ, ಡೆಲ್ಲಿ ಪರ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಜೋಡಿ ಭರ್ಜರಿ ಫಾರ್ಮ್‌ನಲ್ಲಿದೆ. ಈ ಟೂರ್ನಿಯ ಆರೇಂಜ್ ಕ್ಯಾಪ್ ಹೋಲ್ಡರ್ ಆಗಿರುವ ಧವನ್ ಎಂತಹ ಸಮಯದಲ್ಲೂ ತಂಡಕ್ಕೆ ನೆರವಾಗಬಲ್ಲುರು. ಮಧ್ಯಮ ಕ್ರಮಾಂಕದಲ್ಲಿ ಈವರಿಗೆ ಉತ್ತಮ ಸಾಥ್ ದೊರೆಯುತ್ತಿದ್ದು, ಸ್ಟೀವ್ ಸ್ಮಿತ್ ಹಾಗೂ ರೀಷಭ್ ಪಂತ್ ತಮಗೆ ಸಿಕ್ಕ ಅವಕಾಶವನ್ನ ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಇತ್ತ ಬೌಲಿಂಗ್ ವಿಭಾಗದಲ್ಲೂ ಡೆಲ್ಲಿ ತಂಡ ಬಲಾಡ್ಯವಾಗಿದೆ. ರಬಾಡ, ಆವೇಶ್ ಖಾನ್, ಅನುಭವಿ ಅಮಿತ್ ಮಿಶ್ರಾ, ಆರ್.ಅಶ್ವಿನ್ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಸದ್ಯ ಎರಡು ತಂಡಗಳಿಗೂ ಗೆಲುವಿನ ಅವಶ್ಯಕತೆಯಿದ್ದು, ಈ ಪಂದ್ಯದಲ್ಲಿ ಬಿಗ್ ಫೈಟ್ ನೀರಿಕ್ಷಿಸಬಹುದಾಗಿದೆ.