ಮಾಜಿ ಕ್ರಿಕೆಟಿಗ ಮತ್ತು ಲಕ್ನೋ ಸುಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಲಕ್ನೋ ಎದುರು ಆರ್ಸಿಬಿ 18 ರನ್ಗಳ ಗೆಲುವು ಸಾಧಿಸಿದ ನಂತರ ಹಸ್ತಲಾಘವದ ಮುಖಾಮುಖಿಯಾದ ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದರು. ಇದಕ್ಕಾಗಿ ಇಬ್ಬರಿಗೂ ದಂಡ ವಿಧಿಸಲಾಗಿದೆ.
ಇದು ಎರಡು ದಿನದಿಂದ ಚರ್ಚೆಯಲ್ಲಿರುವ ವಿಷಯವಾಗಿದೆ. ಅನುಭವಿಗಳಿಬ್ಬರು ಮೈದಾನದಲ್ಲಿ ಈ ರೀತಿ ಮಾತನಾಡಿಕೊಳ್ಳುವುದು ಎಷ್ಟು ಸರಿ ಎಂದು ಕೆಲವರು ಹೇಳುತ್ತಾರೆ. ಸ್ಟಾರ್ ಸ್ಪೋರ್ಟ್ನಲ್ಲಿ ರವಿಶಾಸ್ತ್ರಿ ಬಳಿ ಅಭಿಮಾನಿ ಒಬ್ಬ ವಿರಾಟ್ ಅವರು ಮಾಡುವ ಸೆಲಬ್ರೇಷನ್ ಅನ್ನು ನೀವು ಕೋಚ್ ಆಗಿದ್ದಾಗ ತಡೆಯುತ್ತಿದ್ದಿರಾ ಎಂದು ಕೇಳಿದ್ದ. ಇದಕ್ಕೆ ಉತ್ತರಿಸಿದ ಶಾಸ್ತ್ರಿ "ಸಂತೋಷವನ್ನು ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶವಿದೆ" ಎಂದಿದ್ದಾರೆ.
ಈ ಘಟನೆಯನ್ನು ಹುಬ್ಬಳ್ಳಿ ಧಾರವಾಡದ ಅವಳಿ ನಗರದ ಪೋಲೀಸರು ಜಾಗೃತಿಗೆ ಬಳಸಿಕೊಂಡಿದ್ದಾರೆ. ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (Emergency Response Support System-ERSS112)ಯ ಬಗ್ಗೆ ಜನಕ್ಕೆ ಟ್ವಿಟರ್ನಲ್ಲಿ 112ನ ಬಳಕೆ ಬಗ್ಗೆ ಬರೆದುಕೊಂಡಿದ್ದಾರೆ. "ಅಂತಾ ಟೈಮ್ ನ್ಯಾಗ ನೀವ ನಮ್ಮ #ERSS112 ಗ ಕಾಲ್ ಮಾಡ್ಬೇಕಿತ್ರೀ.. ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ.. #ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ. ಗೊತ್ತಲ್ಲಾ ನಮ್ಮ ರೀಚ್ ಟೈಮ್.." ಎಂದು ಆರ್ಸಿಬಿಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದೆ.