ಅಹ್ಮದಾಬಾದ್, ಗುಜರಾತ್: ಕಳೆದಿನ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆದ್ದು ಪಾಯಿಂಟ್ ಸ್ಥಾನದಲ್ಲಿ 2ಕ್ಕೆ ಏರಿಕೆ ಕಂಡಿದೆ. ಐಪಿಎಲ್ನಲ್ಲಿ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು ರನ್ರೇಟ್ ಆಧಾರದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲನೇ ಸ್ಥಾನವನ್ನು ಅಲಂಕರಿಸಿದೆ.
ಅಗ್ರಸ್ಥಾನದಲ್ಲಿ ಚೆನ್ನೈ ತಂಡ:ಐಪಿಎಲ್ನ ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ ತಂಡ ಪಾಯಿಂಟ್ ಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೊದಲನೇ ಸ್ಥಾನವನ್ನು ಅಲಂಕರಿಸಿದೆ. ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ ಭರ್ಜರಿ ಜಯ ಸಾಧಿಸಿದೆ. ಅಜಿಂಕ್ಯ ರಹಾನೆ ಚೆನ್ನೈ ಸೂಪರ್ ಕಿಂಗ್ಸ್ ಪರ 29 ಎಸೆತಗಳಲ್ಲಿ 71 ರನ್ ಗಳಿಸಿ ಮಿಂಚಿದರು. ಈಡನ್ ಗಾರ್ಡನ್ಸ್ನಲ್ಲಿ ನೆರದಿದ್ದ ಸಹಸ್ರಾರು ಪ್ರೇಕ್ಷಕರ ಬೆಂಬಲದಿಂದ ಉತ್ತೇಜಿತರಾಗಿ ಭರ್ಜರಿ ಬ್ಯಾಟ್ ಬೀಸಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್‌ಗಳಿಂದ ಭರ್ಜರಿ ಜಯಗಳಿಸಿ ರನ್ರೇಟ್ ಆಧಾರದ ಮೇಲೆ ಪಾಯಿಂಟ್ ಟೇಬಲ್ನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇನ್ನು ಕೊನೆಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಲಂಕರಿಸಿದೆ. ಆಡಿರುವ 7 ಪಂದ್ಯಗಳಲ್ಲಿ ಡೆಲ್ಲಿ ತಂಡ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ.
ಗುಜರಾತ್ ಟೈಟಾನ್ಸ್ಗೆ ಎರಡನೇ ಸ್ಥಾನ: ಮಂಗಳವಾರ ರಾತ್ರಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಎದುರಿನ ಸವಾಲಿನಲ್ಲಿ ಮುಂಬೈ ಇಂಡಿಯನ್ಸ್ ಮುಗ್ಗರಿಸಿದೆ. ಬ್ಯಾಟಿಂಗ್ ವೈಫಲ್ಯದಿಂದಾಗಿ 55 ರನ್ಗಳ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿ ಗುಜರಾತ್ ಟೈಟಾನ್ಸ್ ನೀಡಿದ 207 ರನ್ಗಳ ಸವಾಲಿಗೆ ಉತ್ತರವಾಗಿ ಮುಂಬೈ 152 ರನ್ ಮಾತ್ರ ಗಳಿಸಿ ಸೋಲು ಕಂಡಿತು. ಈ ಗೆಲುವಿನ ಮೂಲಕ ಗುಜರಾತ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಗುಜರಾತ್ ತಂಡವೂ ಸಹ 10 ಅಂಕಗಳು ಪಡೆದಿದ್ದು, ರನ್ರೇಟ್ ಆಧಾರದ ಮೇಲೆ ಎರಡನೇ ಸ್ಥಾನಕ್ಕೆ ಕುಸಿದಿದೆ. 9ನೇ ಸ್ಥಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮುಂದುವರಿದಿದೆ. ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಹೈದರಾಬಾದ್ ತಂಡ ಕೇವಲ 2 ಪಂದ್ಯಗಳನ್ನು ಗೆದ್ದಿದ್ದು, 4 ಅಂಕಗಳೊಂದಿಗೆ ರನ್ ರೇಟ್ ಆಧಾರ ಮೇಲೆ 9ನೇ ಸ್ಥಾನವನ್ನು ಅಲಂಕರಿಸಿದೆ.
3ನೇ ಸ್ಥಾನದಲ್ಲಿದೆ ರಾಜಸ್ಥಾನ್ ರಾಯಲ್ಸ್:ರಾಜಸ್ಥಾನ ರಾಯಲ್ಸ್ ತಂಡ ಭಾನುವಾರ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆರ್ಆರ್ ತಂಡ ಈ ಸೋಲಿನ ಮೂಲಕ 8 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿತ ಕಂಡಿತು. ಇನ್ನು ಎಂಟನೇ ಸ್ಥಾನವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಅಲಂಕರಿಸಿದೆ. ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸೋಲು ಕಂಡಿತು. ಆಡಿರುವ 7 ಪಂದ್ಯಗಳಲ್ಲಿ ಶಾರೂಖ್ ಖಾನ್ ತಂಡ ಕೇವಲ 2 ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಪಡೆದಿದೆ. ರನ್ ರೇಟ್ ಆಧಾರದ ಮೇಲೆ ಕೆಕೆಆರ್ ತಂಡ ಎಂಟನೇ ಸ್ಥಾನದಲ್ಲಿದೆ.